ADVERTISEMENT

ಬಿಜೆಪಿಯಿಂದ ಶಿಕ್ಷಣದ ಕೇಸರೀಕರಣ: ಎನ್‌ಎಸ್‌ಯುಐ

​ಪ್ರಜಾವಾಣಿ ವಾರ್ತೆ
Published 26 ಮೇ 2022, 15:56 IST
Last Updated 26 ಮೇ 2022, 15:56 IST
ರಫೀಕ್‌ ಅಲಿ
ರಫೀಕ್‌ ಅಲಿ   

ಚಾಮರಾಜನಗರ: ರಾಜ್ಯದ ಬಿಜೆಪಿ ಸರ್ಕಾರವು ಶಾಲಾ ಪಠ್ಯಪುಸ್ತಕಗಳ ಮೂಲಕ ಮಕ್ಕಳ ಮನಸ್ಸಿನಲ್ಲಿ ಹಿಂದುತ್ವವನ್ನು ಬಿತ್ತಲು ಹುನ್ನಾರ ನಡೆಸುತ್ತಿದ್ದು, ಶಿಕ್ಷಣದ ಕೇಸರೀಕರಣ ಮಾಡುತ್ತಿದೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಆರೋಪಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಫೀಕ್‌ ಅಲಿ ಅವರು, ‘ಸರ್ಕಾರ ನೇಮಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಆರ್‌ಎಸ್‌ಎಸ್‌ನವರು. ಬಿಜೆಪಿ ಜೊತೆಯಲ್ಲಿ ಕೆಲಸ ಮಾಡಿದವರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್‌ಗಳನ್ನು ನೋಡಿದರೆ ಅವರ ಮನೋಭಾವ ಹೇಗಿದೆ ಎಂಬುದು ಗೊತ್ತಾಗುತ್ತದೆ. ಸಂವಿಧಾನ ವಿರೋಧಿ ಕೆಲಸಗಳನ್ನೇ ಮಾಡುತ್ತಾ ಬಂದಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದ ಪಠ್ಯಪರಿಷ್ಕರಣಾ ಸಮಿತಿಯು ಸಾಮಾಜಿಕ ನ್ಯಾಯ, ಮೌಲ್ಯಯುತ ವಿಚಾರಗಳು ವೈಜ್ಞಾನಿಕ ವಿಷಯಗಳಿಗೆ ಒತ್ತು ನೀಡಿ ಪಠ್ಯಪುಸ್ತಕ ರಚನೆ ಮಾಡಿತ್ತು. ಆದರೆ, ಈಗಿನ ಸಮಿತಿಯು ಹೆಡ್ಗೇವಾರ್‌, ಚಕ್ರವರ್ತಿ ಸೂಲಿಬೆಲೆಯಂಥವರ ಬರಹಗಳನ್ನು ಅಳವಡಿಸುವ ಮೂಲಕ ಮಕ್ಕಳ ಮನಸ್ಸನ್ನು ಕದಡಲು ಯತ್ನಿಸುತ್ತಿದೆ. ಬಸವರಾಜು, ಸಾರಾ ಅಬೂಬಕ್ಕರ್‌, ಕುವೆಂಪು ಮುಂತಾದವರ ಬರಹಗಳನ್ನು ಕೈಬಿಟ್ಟಿದೆ. ಬಿಜೆಪಿ ಸರ್ಕಾರವು ಪಠ್ಯ ಪುಸ್ತಕದ ಪರಿಷ್ಕರಣೆ ನೆಪದಲ್ಲಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಹುನ್ನಾರ ಮಾಡುತ್ತಿದೆ’ ಎಂದರು.

ADVERTISEMENT

‘ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪರಿಷ್ಕರಣಾ ಸಮಿತಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಮಿತಿಯು ಪಠ್ಯಪುಸ್ತಕ ಪ‍ರಿಷ್ಕರಣೆ ಮಾಡುವುದಕ್ಕೂ ಮೊದಲು ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರು, ವಿಷಯ ತಜ್ಞರ ಅಭಿಪ್ರಾಯ ಕೇಳಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಈಗಿನ ಪುಸ್ತಕಗಳನ್ನು ತಡೆ ಹಿಡಿದು ಎಲ್ಲರೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಪಠ್ಯಪುಸ್ತಕ ಸಿದ್ಧಪಡಿಸಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಎನ್‌ಎಸ್‌ಯುಐನ ಜಿಲ್ಲಾ ಅಧ್ಯಕ್ಷ ಮೋಹನ್‌ ಕುಮಾರ್‌ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಯ್ಕ, ಕುಮಾರ್‌, ಸ್ಟ್ಯಾನಿ, ಮಹಿಳಾ ಘಟಕದ ಉಪಾಧ್ಯಕ್ಷೆ ಸುಷ್ಮಿತಾ, ಮೈಸೂರು ವಿವಿ ಘಟಕದ ಉಪಾಧ್ಯಕ್ಷ ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.