ADVERTISEMENT

ವಿಜಯೇಂದ್ರನೊಂದಿಗೆ ನನ್ನನ್ನು ಹೋಲಿಸಬೇಡಿ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 12:58 IST
Last Updated 8 ಜೂನ್ 2022, 12:58 IST
ವಿ.ಸೋಮಣ್ಣ
ವಿ.ಸೋಮಣ್ಣ   

ಚಾಮರಾಜನಗರ: ‘ನನಗೆ 71 ವರ್ಷ, ವಿಜಯೇಂದ್ರನಿಗೆ 41 ವರ್ಷ. ಅವನಿಗೂ ನನಗೂ ಹೋಲಿಕೆ ಮಾಡಬೇಡಿ. ಯಾರ‍್ಯಾರ ಹಣೆಬರಹ ಏನಿದೆಯೋ ಅದು ಆಗುತ್ತದೆ’ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಬುಧವಾರ ಹೇಳಿದರು.

ಮೈಸೂರಿನಲ್ಲಿ ಸೋಮಣ್ಣ ಸಮ್ಮುಖದಲ್ಲೇ ‘ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ನಿನ್ನೆಗೆ ಮುಗಿದ ಅಧ್ಯಾಯ. 2023ಕ್ಕೆ ಚುನಾವಣೆ ಬರುತ್ತದೆ. ಹೈಕಮಾಂಡ್‌ ಟಿಕೆಟ್‌ ಕೊಡಬೇಕು. ನಾನು ಏಳು ಬಾರಿ ಶಾಸಕನಾಗಿದ್ದೇನೆ. ವಿಜಯೇಂದ್ರ ಒಮ್ಮೆಯೂ ಆಗಿಲ್ಲ. ಒಂದು ಬಾರಿಯಾದರೂ ಗೆಲ್ಲಲಿ ಬಿಡಿ’ ಎಂದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಬರಬೇಕು ಎಂಬುದು ನನ್ನ ಆಸೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು’ ಎಂದರು.

ADVERTISEMENT

ದಿಕ್ಸೂಚಿಯಲ್ಲ: ‘ಪದವೀಧರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯು ಮುಂಬರುವ ಚುನಾವಣೆಗೆ ದಿಕ್ಸೂಚಿಯಲ್ಲ. ಅಳತೆಗೋಲು.ವಿಧಾನಪರಿಷತ್ತಿನ ನಾಲ್ಕಕ್ಕೆ ನಾಲ್ಕು ಸ್ಥಾನಗಳಲ್ಲಿ ಬಿಜೆಪಿಗೆ ಜಯಸಿಗಲಿದೆ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ‌ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ’ ಎಂದು ಪ‍್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.