ADVERTISEMENT

ಗೂಂಡಾಗಿರಿ ಸಂಸ್ಕೃತಿಯಿಂದ ಅಧಿಕಾರಕ್ಕೇರುವ ಕನಸು: ನಿಜಗುಣರಾಜು

ಡಿ.ಕೆ.ಸುರೇಶ್, ಡಿಕೆಶಿ ಭಾವಚಿತ್ರ ಸುಟ್ಟು ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 11:21 IST
Last Updated 5 ಜನವರಿ 2022, 11:21 IST
ರಾಮನಗರದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರು ಉನ್ನತ ಶಿಕ್ಷಣ ಸಚಿವ ಸಿ.ಎಸ್‌.ಅಶ್ವತ್ಥನಾರಾಯಣ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು
ರಾಮನಗರದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರು ಉನ್ನತ ಶಿಕ್ಷಣ ಸಚಿವ ಸಿ.ಎಸ್‌.ಅಶ್ವತ್ಥನಾರಾಯಣ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಮನಗರದ ಸರ್ಕಾರಿ ಕಾರ್ಯಕ್ರಮದಲ್ಲಿ ಅಲ್ಲಿನ ಸಂಸದ ಡಿ.ಕೆ.ಸುರೇಶ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಸೇರಿದ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಡಿ.ಕೆ.ಸುರೇಶ್ ಹಾಗೂ ಅವರ ಅಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳನ್ನು ಸುಟ್ಟು ಅಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಹಾಗೂ ಹಾಸನ ಜಿಲ್ಲಾ ಪ್ರಭಾರಿ ನಿಜಗುಣರಾಜು ಅವರು ಮಾತನಾಡಿ, ’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರದಲ್ಲಿ ₹300 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಮಂತ್ರಿ ಎಂಬುದನ್ನೂ ಲೆಕ್ಕಿಸದೆ ಅವರ ಮೇಲೆ ಹಲ್ಲೆಗೆ ಮುಂದಾಗಿರುವುದು ಇವರ ಗೂಂಡಾವರ್ತನೆ ತೋರಿಸುತ್ತದೆ‘ ಎಂದು ಕಿಡಿಕಾರಿದರು.

ADVERTISEMENT

ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ಅವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಗರಸಭಾ ಸದಸ್ಯ ಸುದರ್ಶನಗೌಡ, ಮುಖಂಡರಾದ ಸುರೇಶ್ ನಾಯಕ, ಅಯ್ಯನಪುರ ಶಿವಕುಮಾರ್, ಪಣ್ಯದಹುಂಡಿ ಸತೀಶ್, ಮಹೇಶ್, ದೊಡ್ಡಮೋಳೆ ರಂಗನಾಥ್, ರಂಗಸ್ವಾಮಿ, ಉಡಿಗಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ಚಂದಕವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯೇಂದ್ರ, ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್ ಇತರರು ಇದ್ದರು.

ಪ್ರತಿಭಟನೆ ಬಳಿಕ ಸುದ್ದಿಗೋಷ್ಟಿ ನಡೆಸಿದ ನಿಜಗುಣರಾಜು ಅವರು, ’ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರು ಗೂಂಡಾ ಸಂಸ್ಕೃತಿ ಮೂಲಕ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ. ರಾಮನಗರ–ಕನಕಪುರವನ್ನು ರಾಜ್ಯ ಎಂದು ತಿಳಿದುಕೊಂಡು ವರ್ತಿಸುತ್ತಿದ್ದಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಡಿ.ಕೆ.ಸುರೇಶ್‌ ಅವರು ರಾಮನಗರದ ಕಾರ್ಯಕ್ರಮದಲ್ಲಿ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ತೋಳೆರಿಸಿರುವುದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಇದು ಅವರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕೊತ್ವಾಲ್‌ ರಾಮಚಂದ್ರನ ಶಿಷ್ಯ. ಅವರ ಸಂಸ್ಕೃತಿಯೇ ಅದು ಎಂದು ಕಿಡಿಕಾರಿದರು.

’ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸೈನ್ಯ ಇರುವವರೆಗೆ ಇವರ ಗೂಂಡಾ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ. ಇದೇ ವರ್ತನೆ ಮುಂದುವರೆದರೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ‘ ಎಂದು ನಿಜಗುಣರಾಜು ಅವರು ಹೇಳಿದರು.

ಮುಖಂಡರಾದ ಅಯ್ಯನಪುರ ಶಿವಕುಮಾರ್‌, ಸುರೇಶ್‌ ನಾಯಕ್‌, ಹನುಮಂತ ಶೆಟ್ಟಿ ಮಹೇಶ್‌ ಇದ್ದರು.

ಮೇಕೆದಾಟು: ದಾರಿ ತಪ್ಪಿಸುವ ತಂತ್ರ

’ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ 40ರಿಂದ 50 ವರ್ಷಗಳಷ್ಟು ಆಳಿದೆ. ಆಗ ಇವರಿಗೆ ಮೇಕೆದಾಟು ನೆನಪಿಗೆ ಬರಲಿಲ್ಲ. ಈಗ ಬಿಜೆಪಿ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿರುವಾಗ ಜನರ ದಾರಿ ತಪ್ಪಿಸಲು ಪಾದಯಾತ್ರೆಯನ್ನು ಕೈಗೊಂಡಿದೆ‘ ಎಂದು ನಿಜಗುಣರಾಜು ಅವರು ದೂರಿದರು.

’ಯಡಿಯೂರಪ್ಪ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ಈ ಯೋಜನೆ ಅನುಷ್ಠಾನದ ಬಗ್ಗೆ ಪೂರ್ವಭಾವಿ ಸಭೆಗಳನ್ನು ನಡೆಸಿದ್ದಾರೆ. ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ಬೇರೆನೂ ಸಿಗದಿದ್ದಾಗ, ಜನರನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶದಿಂದ ‍ಕಾಂಗ್ರೆಸ್‌ ಮುಖಂಡರು ಪಾದಯಾತ್ರೆಯ ನಾಟಕ ಆಡುತ್ತಿದ್ದಾರೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.