ADVERTISEMENT

ಮಾಡಿರುವ ದುಡ್ಡನ್ನು ಜನರಿಗೆ ಖರ್ಚು ಮಾಡಿ: ಶಾಸಕ ಪುಟ್ಟರಂಗಶೆಟ್ಟಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 5:58 IST
Last Updated 14 ಜೂನ್ 2021, 5:58 IST
ಮಲ್ಲೇಶ್‌
ಮಲ್ಲೇಶ್‌   

ಚಾಮರಾಜನಗರ: ‘ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಬಳಿ ಕೆರೆಯಲ್ಲಿ ನೀರು ತುಂಬಿರುವ ರೀತಿ ಹಣ ತುಂಬಿದೆ. ಕಷ್ಟದಲ್ಲಿ ಇರುವವರಿಗೆ ಎರಡು ಬೊಗಸೆ ನೀರು ಕೊಟ್ಟರೆ ಕರೆ ಖಾಲಿಯಾಗುತ್ತದೆಯೇ? ಅವರು ನಮ್ಮ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು, ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಹೆಚ್ಚಿನ ನೆರವು ನೀಡಲು ಮುಂದಾಗಬೇಕು’ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಭಾನುವಾರ ಸಲಹೆ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ನಾನೂ ಸೇರಿದಂತೆ ಬಿಜೆಪಿ ಮುಖಂಡರು ನಮ್ಮ ಕೈಲಾದಷ್ಟು ಕೋವಿಡ್‌ ಸಂತ್ರಸ್ತರಿಗೆ ನೆರವಾಗುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಮಾಸ್ಕ್‌, ಸ್ಯಾನಿಟೈಸರ್‌, ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ. ಇದನ್ನು ‘ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ’ ಎಂದು ಪುಟ್ಟರಂಗಶೆಟ್ಟಿ ಅವರು ಟೀಕಿಸಿದ್ದಾರೆ. ನಾವು ಪ್ರಚಾರಕ್ಕಾಗಿ ಮಾಡಿಲ್ಲ.ಹೃದಯವೈಶಾಲ್ಯದಿಂದ ಮಾಡಿದ್ದೇವೆ. ಆದರೆ ಪುಟ್ಟರಂಗಶೆಟ್ಟಿ ಅವರು ಆರಂಭದಲ್ಲಿ ಏನು ಮಾಡಿದ್ದರು? ನಾನು ಅವರನ್ನು ಟೀಕೆ ಮಾಡಿದ ನಂತರ ಗ್ರಾಮಗಳಿಗೆ ತೆರಳಿ 500 ಎನ್‌ 95 ಮಾಸ್ಕ್‌, 500ರಿಂದ 1000 ಸರ್ಜಿಕಲ್‌ ಮಾಸ್ಕ್‌ ವಿತರಿಸಿದ್ದಾರೆ. ಸರ್ಜಿಕಲ್‌ ಮಾಸ್ಕ್‌ಗಳನ್ನು ಆರೋಗ್ಯ ಇಲಾಖೆಯಿಂದ ಪಡೆದಿದ್ದಾರೆ’ ಎಂದು ಆರೋಪಿಸಿದರು.

‘ಸರ್ಜಿಕಲ್‌ ಮಾಸ್ಕ್‌ ಅನ್ನು ಮೂರರಿಂದ ಆರು ಗಂಟೆಯವರೆಗೆ ಹಾಕಬಹುದು. ಇದರಿಂದ ಜನರಿಗೆ ಅನುಕೂಲ ಆಗುತ್ತದೆಯೇ? ಕೊತ್ತಲವಾಡಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಕೋವಿಡ್‌ನಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಪುಟ್ಟರಂಗಶೆಟ್ಟಿ ಅವರು ಅಲ್ಲಿಗೆ ಹೋಗಿ ಸಾಂತ್ವನ ಹೇಳಿಲ್ಲ’ ಎಂದು ದೂರಿದರು.

ADVERTISEMENT

‘ಪುಟ್ಟರಂಗಶೆಟ್ಟಿ ಅವರು ಶುದ್ಧಹಸ್ತರೋ? ಏನೂ ಮಾಡಿಲ್ವಾ? ಎಷ್ಟು ಲೂಟಿ ಹೊಡೆದಿದ್ದಾರೆ, ಎಷ್ಟು ಸಂಪಾದಿಸಿದ್ದಾರೆ ಎಂಬುದು ಗೊತ್ತಿದೆ. ಮೂರು ಬಾರಿ ಶಾಸಕರಾಗಿದ್ದಾರೆ.ಕ್ಷೇತ್ರದ ಜನರಿಗೆ ಅವರು ಸಹಾಯ ಮಾಡಲಿ. ಜನಸಾಮಾನ್ಯನಾಗಿ ನಾನೇ ಇಷ್ಟು ಸಹಾಯ ಮಾಡಿರುವಾಗ, ಅವರು 15 ಪಟ್ಟು ಹೆಚ್ಚು ಸಹಾಯ ಮಾಡಬೇಕು’ ಎಂದರು.

ಮುಖಂಡರಾದ ಬಿಸಿಲವಾಡಿ ನಟರಾಜು,ಪರಮೇಶ್‌, ಬಸವನಪುರ ರಾಜಶೇಖರ್‌, ಜ್ಯೋತಿಗೌಡನಪುರ ಸತೀಶ್‌ ಇದ್ದರು.

ಸಿಂಧೂರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಆಗ್ರಹ
ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲೇಶ್‌ ಅವರು, ‘ಆಮ್ಲಜನಕ ದುರಂತದಲ್ಲಿ 36 ಮಂದಿ ಸಾಯಲು ರೋಹಿಣಿ ಅವರೇ ಕಾರಣ. ಇದು ಹತ್ಯಾಕಾಂಡ. ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದಲೇ ಆಮ್ಲಜನಕ ಪೂರೈಕೆಯಾಗಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಅವರ ಎದುರೇ ಹೇಳಿದ್ದರು. ಹಾಗಿದ್ದರೂ, ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯಾಗಲು ಬಿಡಲಿಲ್ಲ. ತಾಯಿ ಆಗಬೇಕಿದ್ದ ಆಕೆ ಮಾರಿಯಾದರು’ ಎಂದು ಕಿಡಿಕಾರಿದರು.

‘ಸರ್ಕಾರ ಅವರನ್ನು ಅಮಾತನು ಮಾಡಬೇಕಿತ್ತು. ಆದರೆ, ರತ್ನಗಂಬಳಿ ಹಾಸಿ ಬೆಂಗಳೂರಿಗೆ ಕಳುಹಿಸಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಭೂ ಮಾಫಿಯಾ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವ ಕೆಲವರು ಇದೆಲ್ಲಾ ಗೊತ್ತಿಲ್ಲದೇ ಆಕೆಯನ್ನು ಬೆಂಬಲಿಸಿ ಏನೇನೋ ಬರೆಯುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.