ADVERTISEMENT

ಬಿಜೆಪಿ ಇರುವವರೆಗೂ ಸಂವಿಧಾನ ಸುರಕ್ಷಿತ: ಛಲವಾದಿ ನಾರಾಯಣಸ್ವಾಮಿ

ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:56 IST
Last Updated 3 ಡಿಸೆಂಬರ್ 2025, 7:56 IST
ಕೊಳ್ಳೇಗಾಲದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಸಂವಿಧಾನ ಸಮರ್ಪಣಾ ದಿನ ಸಂವಿಧಾನ ಜಾಗೃತಿಗಾಗಿ ಭೀಮನಡೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು
ಕೊಳ್ಳೇಗಾಲದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಸಂವಿಧಾನ ಸಮರ್ಪಣಾ ದಿನ ಸಂವಿಧಾನ ಜಾಗೃತಿಗಾಗಿ ಭೀಮನಡೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು   

ಕೊಳ್ಳೇಗಾಲ: ‘ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಸಂವಿಧಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ನಡೆದ ಸಂವಿಧಾನ ಸಮರ್ಪಣಾ ದಿನ ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನ ಬದಲಾವಣೆ ಮಾತೇ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವ ನಾಯಕ ಎಂಬುದನ್ನು ಈ ದೇಶದ ಜನರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಂವಿಧಾನ ರಕ್ಷಣೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ’ ಎಂದರು.

ADVERTISEMENT

‘ಸಂವಿಧಾನ ಜಾಗೃತಿಗಾಗಿ ಭೀಮನಡೆ ಕಾರ್ಯಕ್ರಮ ಅದ್ದೂರಿಯಾಗಿ ರಾಜ್ಯದ ಎಲ್ಲೆಡೆ ಯಶಸ್ವಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ನಾಶವಾಗುವ ಸ್ಥಿತಿಯಲ್ಲಿದೆ. ಅನುಮಾನವೇ ಇಲ್ಲ. ಈ ಹಿಂದೆ ಕಾಂಗ್ರೆಸ್ ದೊಡ್ಡ ಪಕ್ಷ ಎನಿಸಿಕೊಂಡಿತ್ತು. ಆದರೆ ಈಗ ಅಸ್ತಿತ್ವ ಕಳೆದುಕೊಳ್ಳುತ್ತಿದೆ. 75 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ದಲಿತರನ್ನು ಹಾಗೂ ಮುಸಲ್ಮಾನರನ್ನು ಗುಲಾಮರನ್ನಾಗಿ ಇಟ್ಟುಕೊಂಡಿದೆ’ ಎಂದು ಹೇಳಿದರು.

‘ಸಂವಿಧಾನಕ್ಕೆ ತೊಂದರೆ ಕೊಟ್ಟವರು ಇಂದಿರಾಗಾಂಧಿ. ಸಂವಿಧಾನಕ್ಕೆ ಅನ್ಯಾಯ ಹಾಗೂ ಅಂಬೇಡ್ಕರ್‌ಗೆ ದ್ರೋಹ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅನೇಕ ಮೀಸಲಾತಿ ನೀಡಿ ದಲಿತರ ಏಳಿಗೆಗೆ ಶ್ರಮಿಸಿದ ಸರ್ಕಾರ ಬಿಜೆಪಿ’ ಎಂದು ತಿಳಿಸಿದಿರು.

‘ದಲಿತರನ್ನು ನಾಶ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಹಾಗಾಗಿ ದಲಿತರು ಎಚ್ಚೆತುಕೊಳ್ಳಬೇಕು. ಇಲ್ಲದಿದ್ದರೆ ಸರ್ವನಾಶ ಆಗುವುದರಲ್ಲಿ ಅನುಮಾನವೇ ಇಲ್ಲ’ ಎಂದರು.

‘ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಸ್ಥಾನ ಎಂದಿಗೂ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರನ್ನು ಸರ್ವನಾಶ ಮಾಡುವುದರಲ್ಲಿ ಎತ್ತಿದ ಕೈ. ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕಳುಹಿಸಿದ್ದು, ಗೃಹ ಸಚಿವ ಪರಮೇಶ್ವರ್ ಸೋಲಿಸಿದ್ದು, ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದು ಹೀಗೆ ಅನೇಕ ದಲಿತರನ್ನು ಸರ್ವನಾಶ ಮಾಡಿದದ್ದಾರೆ’ ಎಂದರು.

‘ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಯಾಗಿಲ್ಲ. ಎಲ್ಲಾ ಕ್ಷೇತ್ರವು ಕುಂಠಿತ. ಹಣವನ್ನು ಗ್ಯಾರಂಟಿ ಯೋಜನೆಗೆ ಹಾಕಿ ಸರ್ಕಾರ ದಿವಾಳಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಜನರಿಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ’ ಎಂದರು.

ಬಿಜೆಪಿ ಕಾರ್ಯಕರ್ತರು ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬೈಕ್ ರ‍್ಯಾಲಿ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಮಾಜಿ ಶಾಸಕ ಎಸ್.ಬಾಲರಾಜ್, ಮಾಜಿ ವಿಧಾನ ಪರಿಷತ್ ಪ್ರೊ.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೊಡ ಪ್ರಕಾಶ್, ಕೇಂದ್ರ ಬರ ಪರಿಹಾರ ಮಾಜಿ ನಿಗಮ ಮಂಡಳಿ ಅಧ್ಯಕ್ಷ ಎಂ.ರಾಮಚಂದ್ರ, ಒಬಿಸಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್.ಸುಂದರ ಮೂರ್ತಿ, ಚಂದ್ರು, ಜಿಲ್ಲಾ ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ಟೌನ್ ಅಧ್ಯಕ್ಷ ಚಿಂತು ಪರಮೇಶ್, ಅನಿಲ್, ವೃಷಭೇಂದ್ರ, ಎಸ್‌ಸಿ ಮೋರ್ಚಾದ ಮಂಡಲ ಅಧ್ಯಕ್ಷ ಸಿದ್ದಪ್ಪಾಜಿ ಇದ್ದರು.

‘ಕಾಂಗ್ರೆಸ್ ನಿಜವಾದ ಸಂವಿಧಾನ ವಿರೋಧಿ’

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ ‘ನಿಜವಾಗಿಯೂ ಸಂವಿಧಾನದ ವಿರೋಧಿಗಳು ಎಂದರೆ ಅದು ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾಗಾಂಧಿ. ಕಾಂಗ್ರೆಸ್‌ನವರು 75 ವರ್ಷಗಳ ರಾಜ್ಯಭಾರ ನಡೆಸಿ ಒಟ್ಟು ಸಂವಿಧಾನದಲ್ಲಿ 106 ತಿದ್ದುಪಡಿ ಮಾಡಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ. ಇಲ್ಲಿಯವರೆಗೂ ಯಾವುದೇ ಸಂವಿಧಾನ ಬದಲಾವಣೆ ಮಾಡಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.