ADVERTISEMENT

ಭಾರಿ ಸದ್ದಿಗೆ ಬೆಚ್ಚಿದ ಸಿಂಗನಲ್ಲೂರು- ಅಪಾಯದಿಂದ ಪಾರಾದ 8 ತಿಂಗಳ ಮಗು, ತಾಯಿ

ಮನೆ ಕುಸಿತ;

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 16:14 IST
Last Updated 21 ಡಿಸೆಂಬರ್ 2021, 16:14 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ತಹಶೀಲ್ದಾರ್‌ ಕುನಾಲ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ ಅನ್ನು ಪರಿಶೀಲಿಸಿದರು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ತಹಶೀಲ್ದಾರ್‌ ಕುನಾಲ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ ಅನ್ನು ಪರಿಶೀಲಿಸಿದರು   

ಕೊಳ್ಳೇಗಾಲ: ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮಂಗಳವಾರ ಮುಂಜಾವಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟದ ಶಬ್ದಕ್ಕೆ ಇಡೀ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.

ಸ್ಫೋಟದಿಂದ ಮನೆಯೊಂದು ಸಂಪೂರ್ಣವಾಗಿ ಧ್ವಂಸವಾಗಿದ್ದು, ಮನೆಯ ಮಾಲೀಕ ಸಿದ್ದರಾಜು, ಎಂಟು ತಿಂಗಳ ಮಗು ಹಾಗೂ ಇಬ್ಬರು ಮಹಿಳೆಯರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದರಾಜು ಅವರ ಚಿಕ್ಕಮ್ಮ ರತ್ನಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಫೋಟದ ತೀವ್ರತೆಗೆ ಸಿದ್ದರಾಜು ಮನೆಯ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸ್ಫೋಟದಿಂದಾಗಿ ಮನೆ ಹಾಗೂ ಅದರಲ್ಲೇ ಇದ್ದ ಅಂಗಡಿಗಳ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ತುಂಬಾ ದೂರಕ್ಕೆ ಹೋಗಿ ಬಿದ್ದಿವೆ.

ADVERTISEMENT

ಆರಂಭದಲ್ಲಿ ಸಿಲಿಂಡರ್‌ ಸ್ಫೋಟದಿಂದ ಮನೆ ಕುಸಿದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮನೆಯಲ್ಲಿನ ಸಿಲಿಂಡರ್‌ ಹಾಗೆಯೇ ಇತ್ತು. ಮಂಗಳವಾರ ಸಂಜೆಯಾದರೂ ಸ್ಫೋಟಕ್ಕೆ ಏನು ಕಾರಣ ಎಂಬುದು ತಿಳಿದು ಬಾರದೇ ಇರುವುದರಿಂದ ಗ್ರಾಮದ ಜನರು ಮತ್ತಷ್ಟು ಕಳವಳಗೊಂಡಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅಡುಗೆ ಅನಿಲ ಸಿಲಿಂಡರ್‌ನ ಪೈಪ್‌ ಅಥವಾ ರೆಗ್ಯುಲೇಟರ್‌ನಲ್ಲಿ ಸೋರಿಕೆಯಾಗಿ ಒತ್ತಡ ಸೃಷ್ಟಿಯಾಗಿ ಸ್ಫೋಟ ಆಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಸಿಂಗನಲ್ಲೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅವರು, ಸಮಗ್ರ ತನಿಖೆ ನಡೆಸುಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಚ್ಚಿದ ಊರು: ಮಂಗಳವಾರ ಮುಂಜಾವು 2.40ರ ಸುಮಾರಿಗೆ ಭಾರಿ ಸ್ಫೋಟದ ಸದ್ದು ಕೇಳಿದೆ. ಇಡೀ ಗ್ರಾಮದ ಜನರು ಎಚ್ಚರಗೊಂಡು, ಭಯಭೀತರಾಗಿ ಮನೆಗಳಿಂದ ಹೊರ ಬಂದು ನೋಡಿದ್ದಾರೆ. ಸಿದ್ದರಾಜು ಮನೆ ಹಾಗೂ ಚಿಲ್ಲರೆ ಅಂಗಡಿ ಸಂಪೂರ್ಣವಾಗಿ ಧ್ವಂಸವಾಗಿತ್ತು. ಇದನ್ನು ಕಂಡು ಜನರು ಮತ್ತಷ್ಟು ಗಾಬರಿಗೊಂಡರು. ಭೂಕಂಪ ಸಂಭವಿಸಿರಬಹುದು ಎಂದು ಅಂದಾಜಿಸಿದರು. ಭಯದಲ್ಲೇ ಮನೆಯೊಳಕ್ಕೆ ಹೋಗದೆ ಸೂರ್ಯೋದಯದವರೆಗೂ ಹೊರಗಡೆಯೇ ಕುಳಿತು ಹೊತ್ತು ಕಳೆದರು.

‘ರಾತ್ರಿ 9.45ಕ್ಕೆ ಅಂಗಡಿ ಬಾಗಿಲು ಹಾಕಿ, ನಾನು ಪಕ್ಕದ ಕೊಠಡಿಯಲ್ಲಿ ಮಲಗಿದ್ದೆ. 2.40ರ ಸಮಯದಲ್ಲಿ ಭಾರಿ ಶಬ್ದ ಕೇಳಿಸಿತು. ಬಂದು ನೋಡಿದಾಗ ನನ್ನ ಮನೆ ಮತ್ತು ಚಿಲ್ಲರೆ ಅಂಗಡಿ ಸಂಪೂರ್ಣ ಕುಸಿದು ಬಿದ್ದಿತ್ತು. ಆಗ ನನ್ನ ಚಿಕ್ಕಮ್ಮ ಜೋರಾಗಿ ಕಿರುಚಾಡಿದ್ದಾರೆ. ನಾನು ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದೆ. ಪ್ರಾಣಾಪಾಯವಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ’ ಎಂದು ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದರಾಜು ಚಿಲ್ಲರೆ ಅಂಗಡಿಯೊಳಗೆ ಇದ್ದ ಸಾಮಗ್ರಿಗಳು ಮತ್ತು ಮನೆಯಲ್ಲಿದ್ದ ಸಾಮಗ್ರಿಗಳು ಎಲ್ಲವೂ ನಾಶವಾಗಿವೆ. ಸುತ್ತಮುತ್ತಲಿನ 10ಕ್ಕೂ ಹೆಚ್ಚು ಮನೆಗಳಿಗೆ ಸಣ್ಣ ಹಾನಿಯಾಗಿದೆ’ ಎಂದು ಪೊಲೀಸರು ಹೇಳಿದರು.

ಶ್ವಾನದಳ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಆರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ಮಾಡಿದರು.

––

ವಿಧಿವಿಜ್ಞಾನ ತಜ್ಞರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಗ್ರವಾದ ತನಿಖೆಯ ನಂತರವಷ್ಟೇ ಸ್ಫೋಟಕ್ಕೆ ಏನು ಕಾರಣ ಎಂಬುದು ಗೊತ್ತಾಗಲಿದೆ

- ದಿವ್ಯಾ ಸಾರಾ ಥಾಮಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

––

ಭಾರಿ ಶಬ್ದಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. ನಾವು ಭೂಕಂಪವಾಗಿರಬಹುದು ಎಂದು ಭಾವಿಸಿದ್ದೆವು. ಆ ನಂತರ ಬಂದು ನೋಡಿದರೆ ಈ ಘಟನೆ ನಡೆದಿದೆ. ಇಂತಹ ಶಬ್ದವನ್ನು ಈವರೆಗೆ ಕೇಳೇ ಇರಲಿಲ್ಲ

ರಾಜಣ್ಣ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.