ಹನೂರು: ತಾಲ್ಲೂಕಿನಾದ್ಯಂತ ಗುರುವಾರ ಬಿದ್ದ ಗಾಳಿ ಮಳೆಗೆ ಶಾಗ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಹಾರಿ ಹೋಗಿವೆ.
ಮುಂಜಾನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಮಳೆಯಲ್ಲೂ ಮಕ್ಕಳು ಶಾಲೆಗೆ ಬಂದಿದ್ದರು. ನಂತರ ಗಾಳಿ ಜಾಸ್ತಿಯಾಗುತ್ತಿದ್ದಂತೆ ಶಿಕ್ಷಕರು ಮುನ್ನೆಚ್ಚರಿಕೆಯಾಗಿ ಮಕ್ಕಳನ್ನು ಬೇರೆ ಕೊಠಡಿಗಳಿಗೆ ಕಳುಹಿಸಿದ್ದಾರೆ. ಇದಾದ ಕೆಲ ಸಮಯದಲ್ಲೇ ಗಾಳಿಯ ರಭಸಕ್ಕೆ ಕೊಠಡಿಯ ಹೆಂಚುಗಳು ಹಾರಿ ಹೋಗಿವೆ. ಕೆಲ ಹೆಂಚುಗಳು ಕೊಠಡಿಯೊಳಗೆ ಬಿದ್ದು ಪುಡಿಪುಡಿಯಾಗಿವೆ. ಶಿಕ್ಷಕರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.
ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 189 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 11 ಕೊಠಡಿಗಳಿದ್ದು, ಇದರಲ್ಲಿ ಎರಡು ಮಾತ್ರ ಹೊಸದಾಗಿದ್ದು, ಉಳಿದವು ಹಳೆಯದಾಗಿವೆ. ಕೆಲ ಕೊಠಡಿಗಳು ಶಿಥಿಲಗೊಂಡಿವೆ.
‘ಮಳೆ ಬಿದ್ದಾಗ ಕೊಠಡಿಗಳು ಸೋರುತ್ತವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿರುವ ಸಮಸ್ಯೆ ಬಗ್ಗೆ ಗೊತ್ತಿದ್ದರೂ ಸರಿಪಡಿಸುವ ಗೋಜಿಗೆ ಹೊಗಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅಪಾಯ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಕೂಡಲೇ ಕೊಠಡಿಗಳನ್ನು ದುರಸ್ತಿಪಡಿಸಬೇಕು’ ಎಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಶಾಗ್ಯ ಗ್ರಾಮದ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಕೊಠಡಿ ಹೆಂಚು ಒಡೆದಿರುವುದು ಹಾಗೂ ಶಿಥಿಲವಾಗಿರುವುದು ಗಮನಕ್ಕೆ ಬಂದಿದೆ. ದುರಸ್ತಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.