ADVERTISEMENT

ಅತಿಥಿ ಉಪನ್ಯಾಸಕರ ಹೋರಾಟ; ಬಿಎಸ್‌ಪಿ ಬೆಂಬಲ

ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ; ಸೇವೆ ಕಾಯಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 14:57 IST
Last Updated 4 ಜನವರಿ 2022, 14:57 IST
ಸೇವೆ ಕಾಯಂಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು 26ನೇ ದಿನವಾದ ಮಂಗಳವಾರವೂ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟಿಸಿದರು
ಸೇವೆ ಕಾಯಂಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು 26ನೇ ದಿನವಾದ ಮಂಗಳವಾರವೂ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟಿಸಿದರು   

ಚಾಮರಾಜನಗರ: ಸೇವೆ ಕಾಯಂಗೆ ಆಗ್ರಹಿಸಿ 26 ದಿನಗಳಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಬಹುಜನ ಸಮಾಜ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.

ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿದ್ದು, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಆರೋಪಿಸಿರುವ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗ‌ಯ್ಯ, ಅತಿಥಿ ಉಪನ್ಯಾಸಕರ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ನೀಡಿದ ಹೇಳಿಕೆ ಖಂಡಿಸಿದ್ದಾರೆ.

‘ಉಪನ್ಯಾಸಕರು ಹಾಗೂ ಸರ್ಕಾರದ ಹಗ್ಗಜಗ್ಗಾಟದಿಂದ ತರಗತಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಆಗುತ್ತಿಲ್ಲ.ಇಡೀ ರಾಜ್ಯದಲ್ಲಿ 430ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.’

ADVERTISEMENT

‘ಈ ದೇಶದ ಪ್ರಗತಿಗೆ ಮಾನವ ಸಂಪನ್ಮೂಲ, ಯುವಶಕ್ತಿಯನ್ನು ಸೃಷ್ಟಿಸುವ ಉಪನ್ಯಾಸಕರ ಬದುಕು ಹೀನಾಯ ಸ್ಥಿತಿಯಲ್ಲಿದೆ.ಇವರಿಗೆ ಕನಿಷ್ಠ ವೇತನವೂ ದೊರಕದೆ, ಸೇವಾ ಭದ್ರತೆಯೂ ಇಲ್ಲದೆ ಅತಂತ್ರರಾಗಿ ಜೀವನ ನಿರ್ವಹಣೆಗೆ ಪರಿತಪಿಸುತ್ತಿರುವುದನ್ನು ಸರ್ಕಾರ ಮನಗಾಣಬೇಕು’ ಎಂದು ಅವರು ಹೇಳಿದ್ದಾರೆ.

‘ಈಗಾಗಲೇ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಮಿತಿಮೀರಿದೆ. ಹಾಗಾಗಿ ದಿನಬಳಕೆಯ ಖರೀದಿಗೂ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಅವರ ನ್ಯಾಯಯುತ ಬೇಡಿಕೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು’ ಎಂದು ನಾಗಯ್ಯ ಒತ್ತಾಯಿಸಿದ್ದಾರೆ.

ದಯಾಮರಣ ಕೊಡಿ:ಈ ಮಧ್ಯೆ, 26ನೇ ದಿನವಾದ ಮಂಗಳವಾರವೂ ಅತಿಥಿ ಉಪನ್ಯಾಸಕರು ಜಿಲ್ಲಾಡಳಿತ ಭವನದ ಮುಂಭಾಗ ತಮ್ಮ ಪ್ರತಿಭಟನೆ ಮುಂದುವರೆಸಿದರು.

‘ರಾಜ್ಯದಲ್ಲಿ ನೂರಾರು ಸಂಖ್ಯೆಯ ಅತಿಥಿ ಉಪನ್ಯಾಸಕರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಕನಿಷ್ಠ ಜೀವನವನ್ನು ನಡೆಸಲು ಸಾಧ್ಯವಾಗದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವು ನಮ್ಮ ಸೇವೆ ಕಾಯಂಗೊಳಿಸಬೇಕು. ಇಲ್ಲದಿದ್ದರೆ ನಮಗೆಲ್ಲರಿಗೂ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿಯ ಉಪಾಧ್ಯಕ್ಷೆ ಎಸ್.ಸುವರ್ಣ ಆಗ್ರಹಿಸಿದರು.

ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಸಿದ್ದರಾಜು ಮಾತನಾಡಿ, ‘ರಾಜ್ಯದಾದ್ಯಂತ ಪ್ರತಿಭಟನಾ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ನಡೆಯುತ್ತಿದೆ. ಶಿವಮೊಗ್ಗದಿಂದ ಹೊರಟಿರುವ ಪಾದಯಾತ್ರೆಗೆ ನಾವು ಕೂಡ ಹೋಗಿ ಸೇರಿಕೊಳ್ಳಬೇಕು. ನಂದಿಗ್ರಾಮದಲ್ಲಿ ನಡೆಯುವ ಪಾದಯಾತ್ರೆ ಸೇರಿ ಕೊಳ್ಳಬೇಕಾಗುತ್ತದೆ. ಹಾಗೆಯೇ ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಧರಣಿಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಪ್ರತಿಭಟನನಿರತರಿಗೆ ಮನವಿ ಮಾಡಿದರು.

ಜಿಲ್ಲೆಯಯಲ್ಲಿರುವ ಎಂಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 80ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.