ADVERTISEMENT

ಚಾಮರಾಜನಗರ: ಪ್ಯಾಕೇಜ್‌ ಘೋಷಣೆ; ಕಾರ್ಮಿಕರ ಪತ್ತೆಯೇ ಸವಾಲು

ಒಂದೂವರೆ ತಿಂಗಳಲ್ಲಿ ನೋಂದಣಿಗಾಗಿ ಏಳೂವರೆ ಸಾವಿರ ಅರ್ಜಿ

ಸೂರ್ಯನಾರಾಯಣ ವಿ
Published 13 ಜೂನ್ 2020, 19:30 IST
Last Updated 13 ಜೂನ್ 2020, 19:30 IST
ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು (ಸಂಗ್ರಹ ಚಿತ್ರ)
ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು (ಸಂಗ್ರಹ ಚಿತ್ರ)   

ಚಾಮರಾಜನಗರ: ಕೋವಿಡ್ ಲಾಕ್‌ಡೌನ್ ಜಾರಿಯಾದ ನಂತರ ಸರ್ಕಾರವು ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ತಲಾ ₹5,000 ಸಹಾಯಧನ ನೀಡುವ ಪ್ಯಾಕೇಜ್ ಘೋಷಿಸಿದ ನಂತರ, ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಲು ಭಾರಿ ಪ್ರಮಾಣದಲ್ಲಿ ಜನರು ಅರ್ಜಿ ಸಲ್ಲಿಸುತ್ತಿದ್ದು, ನಿಜವಾದ ಕಟ್ಟಡ ಕಾರ್ಮಿಕರು ಯಾರು ಎಂಬುದನ್ನು ಗುರುತಿಸುವುದು ಕಾರ್ಮಿಕ‌ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಇಲಾಖೆಯ ವಿವಿಧ ಸೌಲಭ್ಯಗಳು ಹಾಗೂ ನೋಂದಣಿಗಾಗಿ ಕಾರ್ಮಿಕ‌ ಇಲಾಖೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಒಂದೂವರೆ ತಿಂಗಳ ಅವಧಿಯಲ್ಲಿ 7,500 ಮಂದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ‌‌ ನಡೆಸುತ್ತಿದ್ದು, ಕಟ್ಟಡ ಕಾರ್ಮಿಕರಲ್ಲದವರೂ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ.

ADVERTISEMENT

ನೋಂದಣಿಗಾಗಿ ಅರ್ಜಿ ಸಲ್ಲಿಸುವರು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ದಾಖಲೆಗಳೊಂದಿಗೆ ಉದ್ಯೋಗ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಕಟ್ಟಡ ಕಾರ್ಮಿಕನಾಗಿ ನೋಂದಣಿ ಮಾಡಿಕೊಳ್ಳಬೇಕಾದರೆ ವರ್ಷದಲ್ಲಿ ಕನಿಷ್ಠ 90 ದಿನಗಳ‌ ಕಾಲ ಕಾರ್ಮಿಕನಾಗಿ ದುಡಿದಿರಬೇಕು ಎಂಬ ನಿಯಮವೂ ಇದೆ.

‘ಕೆಲವರು ಹಳೆಯ ಉದ್ಯೋಗ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದಾರೆ. ಕೆಲವು ಪ್ರಮಾಣಪತ್ರಗಳು‌ ನಕಲಿ ಎಂಬುದು ತಿಳಿದು ಬಂದಿದೆ’ ಎಂದು‌‌ ಜಿಲ್ಲಾ ಕಾರ್ಮಿಕ ಅಧಿಕಾರಿ‌ ಎಂ.ಮಹಾದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಮಿಕರು ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಲು ಮುಂದೆ‌ ಬಂದರೆ ಒಳ್ಳೆಯದೇ. ಲಾಕ್‌ಡೌನ್‌ ಆರಂಭವಾದ ನಂತರ ಅರ್ಜಿಗಳ ಸಂಖ್ಯೆ‌ ಹೆಚ್ಚಾಗಿದೆ. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ನೋಂದಣಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಅರ್ಜಿ ಬಂದ‌ ತಕ್ಷಣ, ಉದ್ಯೋಗ ಪ್ರಮಾಣಪತ್ರವನ್ನು ಪರಿಶೀಲಿಸುತ್ತಿದ್ದೇವೆ. ಪ್ರಮಾಣಪತ್ರ ನೀಡಿದ ಗುತ್ತಿಗೆದಾರರು ಅಥವಾ ಸಂಸ್ಥೆಗೆ‌ ಕರೆ ಮಾಡಿ ಪ್ರಮಾಣಪತ್ರ‌ ನೀಡಿರುವ ಬಗ್ಗೆ ವಿಚಾರಿಸುತ್ತಿದ್ದೇವೆ. ಕೆಲವರು, ತಾವು ಯಾರಿಗೂ ಪ್ರಮಾಣಪತ್ರ ಕೊಟ್ಟಿಲ್ಲ ಅಂತ ಹೇಳಿದ್ದಾರೆ. ಲಿಖಿತವಾಗಿಯೂ ನಮಗೆ‌ ಬರೆದು ಕೊಟ್ಟಿದ್ದಾರೆ’ ಎಂದು ಚಾಮರಾಜನಗರ ತಾಲ್ಲೂಕಿನ ಕಾರ್ಮಿಕ ಹಿರಿಯ‌ ಇನ್‌ಸ್ಪೆಕ್ಟರ್ ಕೆ.ಗೀತಾ ತಿಳಿಸಿದರು.

ಆನ್‌ಲೈನ್ ಅರ್ಜಿ ದಂಧೆ

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗಿರುವುದರಿಂದ ಕೆಲವು ಸೈಬರ್‌ ಸೆಂಟರ್‌ಗಳ ಮಾಲೀಕರು ಇದೇ ಅವಕಾಶವನ್ನು ಬಳಸಿಕೊಂಡು ಜನರನ್ನು‌ ವಂಚಿಸುತ್ತಿದ್ದಾರೆ.

ಒಂದೇ ಉದ್ಯೋಗ ಪ್ರಮಾಣಪತ್ರವನ್ನು ಕಲರ್ ಜೆರಾಕ್ಸ್ ಮಾಡಿ ಬೇರೆ ಬೇರೆಯವರ ಹೆಸರು ಹಾಕಿ ಅಪ್‌ಲೋಡ್ ಮಾಡುತ್ತಿದ್ದಾರೆ.‌ ಅರ್ಜಿದಾರರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂದಿನವರಿಗೆ‌ ಮಾತ್ರ ಪ್ಯಾಕೇಜ್

ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಮಾರ್ಚ್ 31ಕ್ಕೂ‌ ಮೊದಲು ನೋಂದಣಿಯಾದವರಿಗೆ ಮಾತ್ರ ಅನ್ವಯ.

ಕಾರ್ಮಿಕ ಇಲಾಖೆ ನೀಡಿರುವ ಅಂಕಿ– ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 22,552 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, 15,080 ಮಂದಿಗೆ‌ ತಲಾ ₹5,000 ಹಣವನ್ನು ಅವರ ಖಾತೆಗೆ ನೇರವಾಗಿ ಹಾಕಲಾಗಿದೆ. ಇನ್ನೂ 1,300 ಮಂದಿಗೆ‌ ತಲುಪಬೇಕಿದೆ.

ಲಾಕ್‌ಡೌನ್ ಆರಂಭವಾದ ನಂತರ ನೋಂದಣಿ ಮಾಡಿದವರಿಗೂ ದುಡ್ಡು ಬರುತ್ತದೆ ಎಂದು ಜನರು ತಿಳಿದುಕೊಂಡಂತಿದೆ. ಈ ಹಿಂದೆ, ನೋಂದಣಿಯಾದವರಿಗೆ ಮಾತ್ರ ಹಣ ಬಂದಿದೆ ಎಂದು ಮಹದೇವಸ್ವಾಮಿ ಹೇಳಿದರು.

ಮಧ್ಯವರ್ತಿಗಳ ಕಾಟ

ಸರ್ಕಾರದ ಸಹಾಯಧನ ಕೊಡಿಸುವುದಾಗಿ ಕಾರ್ಮಿಕರಿಗೆ ಆಸೆ ತೋರಿಸಿ, ಹಣ ವಸೂಲಿ ಮಾಡಿದ ಪ್ರಕರಣವೂ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸರಿಗೆ‌ ದೂರು ನೀಡಿ ಇಬ್ಬರನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಕಾರ್ಡ್‌ಗಳನ್ನು ಕಾರ್ಮಿಕರಿಗೆ ವಿತರಿಸಿದ್ದ ಮಧ್ಯವರ್ತಿಗಳು ಜನರಿಂದ ಹಣ ವಸೂಲಿ‌ ಮಾಡಿದ್ದರು. ಜನರಿಂದ ದೂರುಗಳು ಬಂದಿದ್ದರಿಂದ ಅಧಿಕಾರಿಗಳು ರಾಮಸಮುದ್ರ ಠಾಣೆಯಲ್ಲಿ‌ ದೂರು ನೀಡಿದ್ದರು.

‘ನರೇಗಾ ಉದ್ಯೋಗ ಕಾರ್ಡ್‌ಗೂ ನಮ್ಮ‌ ಇಲಾಖೆಗೂ ಸಂಬಂಧವಿಲ್ಲ. ಮಧ್ಯವರ್ತಿಗಳು ಜನರಿಂದ ದುಡ್ಡು ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ‌ ದೂರುಗಳು ಬಂದಿವೆ’ ಎಂದು ಮಹದೇವಸ್ವಾಮಿ ಹೇಳಿದರು.

***

ಕಾರ್ಮಿಕರು ಮಧ್ಯವರ್ತಿಗಳ ಸಹಾಯ ಪಡೆಯದೇ ನೇರವಾಗಿ‌ ಇಲಾಖೆಯ ಅಧಿಕಾರಿಗಳೊಂದಿಗೆ ವ್ಯವಹರಿಸಬೇಕು.

–ಮಹದೇವಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.