ADVERTISEMENT

ಚಾಮರಾಜನಗರ: ಹೊಸ ಆಸ್ಪತ್ರೆಗೆ ಬಸ್‌ ಸೇವೆ ಆರಂಭ

ನಗರ ಸಾರಿಗೆ ಬಸ್‌ಗಳ ಓಡಾಟ ಇಂದಿನಿಂದ; ಟಿಕೆಟ್‌ ದರ ₹ 15

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 16:34 IST
Last Updated 26 ಅಕ್ಟೋಬರ್ 2021, 16:34 IST
ಯಡಬೆಟ್ಟದ ಹೊಸ ಆಸ್ಪತ್ರೆಯ ಬಳಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ ಜನರು
ಯಡಬೆಟ್ಟದ ಹೊಸ ಆಸ್ಪತ್ರೆಯ ಬಳಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ ಜನರು   

ಚಾಮರಾಜನಗರ: ನಗರದ ಹೊರ ವಲಯದಲ್ಲಿನ ಯಡಬೆಟ್ಟದಲ್ಲಿ ಕಾರ್ಯಾರಂಭ ಮಾಡಿರುವ ಹೊಸ ಬೋಧನಾ ಆಸ್ಪತ್ರೆಗೆ ಕೆಎಸ್‌ಆರ್‌ಟಿಸಿಯು ಮಂಗಳವಾರದಿಂದ ಬಸ್‌ ಸೇವೆ ಆರಂಭಿಸಿದೆ.

ಸೋಮವಾರದಿಂದ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಶುರುವಾಗಿದೆ. ನಗರದಿಂದ ಏಳು ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಬಸ್‌ ಸೌಲಭ್ಯ ಇಲ್ಲದಿದ್ದುದರಿಂದ ರೋಗಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು.

ಎರಡು ಮೂರು ದಿನಗಳಲ್ಲಿ ಬಸ್‌ ಸೇವೆ ಆರಂಭಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದರು. ಬಸ್‌ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದರು.

ADVERTISEMENT

ಮೊದಲ ದಿನ ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಗೆ ತೆರಳಲು ಅನುಭವಿಸಿದ ಕಷ್ಟ ಹಾಗೂ ಹೆಚ್ಚು ವೆಚ್ಚ ಮಾಡಬೇಕಾದ ಅನಿವಾರ್ಯತೆಗಳನ್ನು ಉಲ್ಲೇಖಿಸಿ ‘ಪ್ರಜಾವಾಣಿ’ ಸೇರಿದಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದವು.

ವರದಿಗಳಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಹಾಗೂ ಕೆಎಸ್‌ಆರ್‌ಟಿಸಿ, ಮಂಗಳವಾರ ಬೆಳಿಗ್ಗೆಯಿಂದಲೇ ಬಸ್‌ ವ್ಯವಸ್ಥೆ ಮಾಡಿದೆ. ‌ನಗರದ ಬಸ್‌ ನಿಲ್ದಾಣದಿಂದ ಗಂಟೆಗೊಂದರಂತೆ ಬಸ್‌ ಸಂಚರಿಸಿದೆ. ರಾತ್ರಿ 7.30ರವರೆಗೆ 12 ಟ್ರಿಪ್‌ಗಳು ಆಗಿವೆ.

‘ಮಂಗಳವಾರದಿಂದಲೇ ಸೇವೆ ಆರಂಭಿಸಿದ್ಧೇವೆ. ಮೊದಲ ದಿನ ಜನರ ಸಂಖ್ಯೆ ಕಡಿಮೆ ಇತ್ತು. ₹ 1200ರಷ್ಟೇ ಹಣ ಸಂಗ್ರಹವಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಟಿಕೆಟ್‌ ₹ 15 ನಿಗದಿ: ‘ಬುಧವಾರದಿಂದ ನಗರ ಸಾರಿಗೆ ಬಸ್‌ಗಳನ್ನು ಹಾಕಲಾಗುವುದು. 45 ನಿಮಿಷಗಳಿಗೆ ಒಂದು ಬಸ್‌ ಆಸ್ಪತ್ರೆಗೆ ತೆರಳಲಿದೆ. ಟಿಕೆಟ್‌ ದರ ₹ 15 ನಿಗದಿ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಏಳು ಕಿ.ಮೀ.ಗೆ ದರ ಜಾಸ್ತಿಯಾಗಲಿಲ್ಲವೇ’ ಎಂದು ಕೇಳಿದ್ದಕ್ಕೆ, ‘ಪ್ರಯಾಣಿಕರು ಇಲ್ಲದಿದ್ದರೆ ನಮಗೆ ನಷ್ಟವಾಗುತ್ತದೆ. ದಿನಕ್ಕೆ ಕನಿಷ್ಠ ₹ 4,000 ಆದಾಯವಾದರೂ ಬರಬೇಕು. ಮೊದಲ ದಿನ ಜನರೇ ಇರಲಿಲ್ಲ. ಮುಂದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಸೌಲಭ್ಯ ಬಳಸುವ ನಿರೀಕ್ಷೆ ಇದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.