ADVERTISEMENT

ವಾರಸುದಾರರಿಗೆ ಚಿನ್ನದ ಸರ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:48 IST
Last Updated 4 ನವೆಂಬರ್ 2020, 15:48 IST
ಉದ್ಯಮಿ ಮಹೇಶ್‌ ಕುಮಾರ್‌ ಅವರು ಪೊಲೀಸರ ಸಮ್ಮುಖದಲ್ಲಿ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿದರು
ಉದ್ಯಮಿ ಮಹೇಶ್‌ ಕುಮಾರ್‌ ಅವರು ಪೊಲೀಸರ ಸಮ್ಮುಖದಲ್ಲಿ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿದರು   

ಚಾಮರಾಜನಗರ: ರಸ್ತೆಯಲ್ಲಿ ಸಿಕ್ಕಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರ ನೆರವು ಪಡೆದು ವಾರಸುದಾರರಿಗೆ ಒಪ್ಪಿಸುವ ಮೂಲಕ ನಗರದ ಉದ್ಯಮಿ ಬಿ.ಮಹೇಶ್‌ ಕುಮಾರ್‌ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸಂತೇಮರಹಳ್ಳಿಯ‌ಲ್ಲಿ ಪ್ರೀಮಿಯಂ ಮೋಟಾರ್ಟ್‌ ಹೆಸರಿ ದ್ವಿಚಕ್ರವಾಹನಗಳ ಶೋ ರೂಂ ಮಾಲೀಕ ಹಾಗೂ ಚಾಮರಾಜನಗರದ ಮರ್ಚೆಂಟ್‌ ಕೊ–ಆಪರೇಟಿವ್‌ ಸಂಸ್ಥೆಯ ಅಧ್ಯಕ್ಷ ಬಿ.ಮಹೇಶ್‌ ಕುಮಾರ್‌ ಅವರು ನವೆಂಬರ್‌ 1ರಂದು ಬೆಳಿಗ್ಗೆ ನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸರವೊಂದು ಸಿಕ್ಕಿತ್ತು.

ಅದನ್ನು ಪರಿಶೀಲಿಸಿದಾಗ ಚಿನ್ನದ ಸರ ಎಂಬುದು ಖಚಿತವಾಯಿತು. ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ, ಈ ಮಾಹಿತಿಯನ್ನು ಪಟ್ಟಣ ಪೊಲೀಸರಿಗೆ ತಿಳಿಸಿದ್ದು ಮಾತ್ರವಲ್ಲದೇ ವಾಟ್ಸ್‌ ಆ್ಯಪ್‌ ಗ್ರೂಪುಗಳು ಹಾಗೂ ಫೇಸ್‌ಬುಕ್‌ನಲ್ಲೂ ಅಪ್‌ಲೋಡ್‌ ಮಾಡಿದ್ದರು.

ADVERTISEMENT

ಅದು ಕೊಳ್ಳೇಗಾಲ ನಿವಾಸಿ ಚಿದಾನಂದ ಎಂಬುವವರಿಗೆ ಸೇರಿದ್ದ ಸರವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅವರು ಪಟ್ಟಣ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಸರ ತಮ್ಮದೇ ಎಂಬುದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಿದರು.

ಮಂಗಳವಾರ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಅವರ ಸಮ್ಮುಖದಲ್ಲಿ ಮಹೇಶ್‌ ಕುಮಾರ್‌ ಅವರು ಸರವನ್ನು ಚಿದಾನಂದ ಅವರಿಗೆ ನೀಡಿದರು.

ಉದ್ಯಮಿ ಎ.ಜಯಸಿಂಹ, ವೆಂಕಟೇಶ್‌, ವಿಜಯಕುಮಾರ್, ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.