ADVERTISEMENT

ಯಳಂದೂರು: ಬನದಲ್ಲಿ ದೊರೆಯದ ಏಲಕ್ಕಿ ಘಮಲು!

ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ಕೃಷಿಗೆ ಬೆನ್ನು ಮಾಡಿದ ಕೃಷಿಕರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:29 IST
Last Updated 10 ನವೆಂಬರ್ 2025, 2:29 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶೇಷಾದ್ರಿ ಅವರು ಬೆಳೆದಿರುವ ಏಲಕ್ಕಿ ಗಿಡಗಳು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶೇಷಾದ್ರಿ ಅವರು ಬೆಳೆದಿರುವ ಏಲಕ್ಕಿ ಗಿಡಗಳು   

ಯಳಂದೂರು: ತಾಲ್ಲೂಕಿನ ಗಿರಿ ಶಿಖರಗಳಲ್ಲಿ ಕಾಫಿ, ಮೆಣಸಿನ ಜೊತೆ ಸಮೃದ್ಧವಾಗಿ ಅರಳುತ್ತಿದ್ದ ಏಲಕ್ಕಿ ಇಳುವರಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಸಾಗಿದೆ.

ಹವಾಮಾನದ ವ್ಯತ್ಯಯ, ವಿಳಂಬ ಕೊಯ್ಲು, ಕೀಟಬಾಧೆ, ಮಳೆ ವಿಳಂಬ ಹಾಗೂ ಪ್ರಾಣಿಗಳ ಹಾವಳಿಯಿಂದ ಬೆಳೆ ಸಂರಕ್ಷಣೆ ಸವಾಲಾಗಿ ಪರಿಣಮಿಸಿದೆ. ಇದರಿಂದ ಏಲಕ್ಕಿ ಬೆಳೆ ಘಟ್ಟದಿಂದ ಬಯಲು ಪ್ರದೇಶಗಳಿಗೆ ಸ್ಥಳಾಂತರವಾಗಿದ್ದು, ಸಮೃದ್ಧ ಫಸಲಿನ ನಿರೀಕ್ಷೆ ಹುಸಿಯಾಗಿದೆ.

ಬಿಳಿಗಿರಿಬೆಟ್ಟದ ಸುತ್ತಮುತ್ತ ಗಿರಿವಾಸಿಗಳು ಮತ್ತು ಸ್ಥಳೀಯರು 25 ವರ್ಷಗಳಿಂದ ಏಲಕ್ಕಿ ಕೃಷಿ ಅಭಿವೃದ್ಧಿ ಪಡಿಸಿದ್ದಾರೆ. ಅಂತರ ಬೆಳೆಯಾಗಿ ಹಣ್ಣೂ, ಕಾಫಿ, ಮೆಣಸು ಗಿಡಗಳ ನಡುವೆ ಬೆಳೆಸಿದ್ದಾರೆ. ಹೆಚ್ಚು ಸುವಾಸನೆ ಹಾಗೂ ದೃಢವಾದ ಕಾಳು ಇರುವ ಮಲೆನಾಡು ತಳಿಗಳ ಜೊತೆ ಸ್ಥಳೀಯ ಸಸ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಹತ್ತಾರು ವರ್ಷಗಳಿಂದ ಏಲಕ್ಕೆ ಬೆಳೆಗಾರ ಹತ್ತಾರು ಸಮಸ್ಯೆ ಎದುರಿಸುತ್ತಿದ್ದು, ಬೆಳೆ ನಿರ್ವಹಣೆ ಮಾಡಲಾಗದೆ ಬೆಳೆಗಾರ ಏದುಸಿರು ಬಿಡುತ್ತಿದ್ದಾನೆ. 

ADVERTISEMENT

‘ಇತ್ತೀಚಿನ ವರ್ಷಗಳಲ್ಲಿ ಏಲಕ್ಕಿಗೆ ತರಗುಮಾರು, ಸಸಿಕೊಳೆ, ಸುಳಿನೊಣ ಹಾಗೂ ಥ್ರಿಫ್ಸ್ ಬಾಧೆಯಿಂದ ಗಿಡಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಕಾಯಿ ಕಟ್ಟುವ ಹಂತದಲ್ಲಿ ಕೋತಿಗಳು ದಾಳಿ ಇಟ್ಟು ಭಕ್ಷಿಸುತ್ತವೆ. ಮಳೆ ಋತುವಿನಲ್ಲಿ ವ್ಯತ್ಯಾಸ, ಉಷ್ಣಾಂಶದಲ್ಲಿ ಏರಿಕೆ ಮೊದಲಾದ ಅಂಶಗಳು ಬೆಳೆಯ ಮೇಲೆ ಪರಿಣಾಮ ಬೀರಿದ್ದು, ಉತ್ಪಾದನೆ ಕುಸಿತಕ್ಕೆ ಕಾರಣ’ ಎನ್ನುವರು ಕಾಫಿ ಬೋರ್ಡ್ ಸದಸ್ಯ ಸಿ.ಮಾದೇಗೌಡ.

ಏಲಕ್ಕಿ ಕೃಷಿ ಹೆಚ್ಚಿನ ಶ್ರಮ ಮತ್ತು ಖರ್ಚು ಬೇಡುತ್ತದೆ. ಶ್ರಮಿಕರ ಕೂಲಿಯಲ್ಲಿ ಏರಿದೆ. ರಸಗೊಬ್ಬರ ಮತ್ತು ಔಷಧೋಪಚಾರ ಬೆಲೆ ಮುಗಿಲು ಮುಟ್ಟಿದೆ. ನುರಿತ ಕಾರ್ಮಿಕರ ಕೊರತೆಯಿಂದ ಹೊಸದಾಗಿ ಏಲಕ್ಕಿ ಬೆಳೆ ಅಭಿವೃದ್ಧಿ ಪಡಿಸುವವರು ಮುಂದೆ ಬರುತ್ತಿಲ್ಲ. ಏಲಕ್ಕಿ ಒಣಗಿಸಲು, ವೈಜ್ಞಾನಿಕವಾಗಿ ಸಂಗ್ರಹಿಸುವ ಮಂದಿಯೂ ಕಡಿಮೆಯಾಗುತ್ತಿದ್ದು, ಏಲಕ್ಕಿ ಬೆಳೆ ಹಿಮ್ಮುಖವಾಗಲು ಕಾರಣ ಎನ್ನಲಾಗಿದೆ.

‘ಕಟಾವಿನ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ, ರೋಗ ನಿರೋಧಕ ತಳಿಗಳನ್ನು ಆಯ್ಕೆ ಮಾಡಿಕೊಂಡು, ಸೂಕ್ತ ಬೆಳೆ ಪದ್ಧತಿಗೆ ಅನುಸಾರವಾಗಿ ಏಲಕ್ಕಿ ನಾಟಿ ಮಾಡಬೇಕು. ರೋಗಗಳ ನಿಯಂತ್ರಣಕ್ಕೆ ಜೈವಿಕ ವಿಧಾನ ಅನುಸರಿಸಿದರೆ ಫಸಲಿಗೆ ಉತ್ತಮ ದರ ಸಿಗಲಿದೆ’ ಎಂದು ಕಾಫಿ ಕೃಷಿಕ ವಾಸು ಸಲಹೆ ನೀಡಿದರು.

ಹೊಸದಾಗಿ ಏಲಕ್ಕಿ ಅಭಿವೃದ್ಧಿ: ಬಿಳಿಗಿರಿಬೆಟ್ಟದ ಸಾಂಪ್ರದಾಯಿಕ ಸಣ್ಣ ಕೃಷಿಕರು ಏಲಕ್ಕಿಯನ್ನು ಬೆಳೆಯುವ ಪರಿಪಾಠ ಹೊಂದಿದ್ದರು.   ವಾರ್ಷಿಕ ಮಳೆ ಕುಸಿತ, ಮಳೆ ದಿನಗಳಲ್ಲಿ ವ್ಯತ್ಯಾಸ, ತಾಪಮಾನದಲ್ಲಿ ಹೆಚ್ಚಳ ಹಾಗೂ ಕೀಟಗಳ ಹಾವಳಿಯೂ ಏಲಕ್ಕಿ ಕೃಷಿಗೆ ಕಂಟಕವಾಗಿ ಪರಿಣಮಿಸಿದ ನಂತರ ಬೆಳೆ ವಿಸ್ತೀರ್ಣ ಕಡಿಮೆಯಾಯಿತು. ಈ ನಡುವೆಯೂ ಕೆಲ ಸಾಂಬಾರ ಬೆಳೆಗಾರರು ಏಲಕ್ಕಿ ಕೃಷಿಯಲ್ಲಿ ಪ್ರಯೋಗಶೀಲರಾಗಿದ್ದು, ಏಲಕ್ಕಿ ಬೆಳೆ ಉಳಿಸುವತ್ತ ಚಿತ್ತ ಹರಿಸಿದ್ದಾರೆ.

‘ಈ ಬಾರಿ ನಲ್ಯಾಣಿಗೋಲ್ಡ್, ಸಕಲೇಶ್ವರ ಹಾಗೂ ಮಲೆನಾಡು ತಳಿಯ ಗಿಡಗಳನ್ನು ನಾಟಿ ಮಾಡಿದ್ದೇವೆ. ಪ್ರತಿ ಗಿಡದಿಂದ ಅರ್ಧ ಕೆಜಿಯಿಂದ 1 ಕೆಜಿ ವರೆಗೂ ಫಸಲು ಬಂದಿದೆ. ಕೊಯ್ಲು ಆರಂಭವಾಗಿದ್ದು, ಧಾರಣೆ ರೂ 2500 ಮುಟ್ಟಿದೆ. ವರ್ಷದ  ಆರಂಭದಲ್ಲಿ ರೂ 3 ಸಾವಿರ ತಲುಪಿತ್ತು. ಏಲಕ್ಕಿ ನಿಖರ ಧಾರಣೆಯೂ ಹಸಿರು ಏಲಕ್ಕಿಯ ಗುಣಮಟ್ಟ ಮತ್ತು ಮಾರುಕಟ್ಟೆಯ ದೈನಂದಿನ ಹರಾಜು ಪ್ರಕ್ರಿಯೆಯನ್ನು ಅವಲಂಬಿಸಿದೆ’ ಎನ್ನುವರು ಏಲಕ್ಕಿ ಬೆಳೆಗಾರ ಶೇಷಾದ್ರಿ.

‘ಹೆಚ್ಚು ಬೇಡಿಕೆ ಇದೆ’

ಮಿಠಾಯಿ ಪಾನೀಯ ಹಾಗೂ ಮದ್ಯ ಹಾಗೂ ಸಾಂಪ್ರದಾಯಿಕ ಪದಾರ್ಥಗಳ ತಯಾರಿಕೆಯಲ್ಲಿ ಏಲಕ್ಕಿಗೆ ಹೆಚ್ಚು ಬೆಡಿಕೆ ಇದೆ. ಬಿಳಿಗಿರಿ ಕಾಡು ಏಲಕ್ಕಿ ಬೆಳೆಯ ನೈಸರ್ಗಿಕ ತಾಣವಾಗಿ ಪ್ರಸಿದ್ಧವಾಗಿದೆ. ಮಣ್ಣಿನಲ್ಲಿ ಹೆಚ್ಚು ಸಾವಯವ ಪದಾರ್ಥ ಸಿಗುವ ಬೆಟ್ಟ ಮತ್ತು ಬಯಲು ಪ್ರದೇಶದತ್ತಲೂ ಏಲಕ್ಕಿ ನಾಟಿಗೆ ಕೃಷಿಕರು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆ ಮತ್ತು ಬಲೆ ಸಿಗಲಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.