ಯಳಂದೂರು (ಚಾಮರಾಜನಗರ ಜಿಲ್ಲೆ): ಜಿಲ್ಲೆಯ ಕೆಲವೆಡೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತಿದೆ. ಸಾರ್ವಜನಿಕರು ಸಮೀಕ್ಷಕರ ಜಾತಿ ಕೇಳಿ ಒಳಗೆ ಬಿಟ್ಟುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸಮೀಕ್ಷಕರು ನೋವು ತೋಡಿಕೊಳ್ಳುತ್ತಿದ್ದಾರೆ.
‘ಈಚೆಗೆ ತಾಲ್ಲೂಕಿನಲ್ಲಿ ಮೇಲ್ವರ್ಗದವರ ಮನೆಗೆ ತೆರಳಿ ಸಮೀಕ್ಷೆಗೆ ಪೂರಕ ಮಾಹಿತಿ ಸಂಗ್ರಹಿಸಿದೆ. ಮನೆಯೊಳಗೆ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೊರಗೆ ಬಂದು ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಿ ಮತ್ತೆ ಮನೆಯೊಳಗೆ ಹೋದಾಗ ನಾವು ಕುಳಿತಿದ್ದ ಕುರ್ಚಿಗಳನ್ನು ನೀರಿನಿಂದ ತೊಳೆಯುತ್ತಿದ್ದ ದೃಶ್ಯ ಕಂಡು ಬೇಸರವಾಯಿತು’ ಎಂದು ಪರಿಶಿಷ್ಟ ಜಾತಿಯ ಶಿಕ್ಷಕರೊಬ್ಬರು ತಿಳಿಸಿದರು.
‘ಸಮೀಕ್ಷೆ ವೇಳೆ ಕೆಲವರು ಯಾವ ಜಾತಿ ಎಂದು ಕೇಳುತ್ತಾರೆ, ಪರಿಶಿಷ್ಟರೆಂದು ತಿಳಿದ ಕೂಡಲೇ ಜಗುಲಿಯಲ್ಲಿ ಕೂರಲು ಹೇಳುತ್ತಾರೆ. ಸಮೀಕ್ಷೆ ಮುಗಿದ ಬಳಿಕ ಜಗುಲಿ ಶುಚಿಗೊಳಿಸುತ್ತಾರೆ. ಇಂತಹ ಕಹಿ ಘಟನೆಗಳು ನೋವುಂಟು ಮಾಡುತ್ತಿವೆ. ಅಸ್ಪೃಶ್ಯತೆ ಎಂಬ ಕರಾಳತೆ ಇಂದಿಗೂ ಕೆಲವೆಡೆ ಜೀವಂತವಾಗಿದೆ’ ಎಂದು ಸಮೀಕ್ಷಕರು ಅಳಲು ತೋಡಿಕೊಂಡರು.
ಯಾರೂ ನಿರಾಕರಿಸಿಲ್ಲ: ತಹಶೀಲ್ದಾರ್
‘ತಾಲ್ಲೂಕಿನಲ್ಲಿ ಸಮೀಕ್ಷೆ ಭರದಿಂದ ನಡೆದಿದೆ. ಹೊಂದಾಣಿಕೆಯಾಗದ 437 ಯುಜಿಐಡಿ ಸಂಖ್ಯೆಗಳ ಪರಿಶೀಲನೆ ನಂತರ ಪೂರ್ಣಗೊಳ್ಳಲಿದೆ. ಸಮೀಕ್ಷಕರ ಜಾತಿಯ ಕಾರಣದಿಂದ ಯಾರೂ ಮಾಹಿತಿ ನೀಡಲು ನಿರಾಕರಿಸಿಲ್ಲ’ ಎಂದು ತಹಶೀಲ್ದಾರ್ ಎಸ್.ಎಲ್.ನಯನ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.