
ಹನೂರು: ತಾಲ್ಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗನ್ನೂರು ಬೈಲು ಹೊರವಲಯದ ಮಾಮರದೊಡ್ಡಿ ಸಮೀಪ ಗುರುವಾರ ಐದು ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ.
ವಿಷಪೂರಿತ ಆಹಾರ ಸೇವಿಸಿ ಹಸುಗಳು ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮಾಮರದೊಡ್ಡಿ ಗ್ರಾಮದ ತಂಗವೇಲು 9 ಹಸುಗಳನ್ನು ಅರಣ್ಯದ ಸಮೀಪ ಮೇಯಲು ಬಿಟ್ಟಿದ್ದರು. ಕೆಲ ಸಮಯದ ಬಳಿಕ ಐದು ಹಸುಗಳು ಅರಣ್ಯ ಸಮೀಪದ ಕಂದಾಯ ಜಮೀನಿನಲ್ಲಿ ನರಳಾಡುತ್ತಿರುವುದನ್ನು ಗಮನಿಸಿದ ತಂಗವೇಲು ನೀರು ಕುಡಿಸಲು ಯತ್ನಿಸಿದರೂ ಸ್ಪಂದಿಸದೆ ಮೃತಪಟ್ಟಿವೆ.
ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ರಾಮಪುರ ಠಾಣೆಯ ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ, ಪಿಎಸ್‌ಐ ಲೋಕೇಶ್ ಭೇಟಿನೀಡಿ ಪರಿಶೀಲಿಸಿದರು.
ಬುಧವಾರವಷ್ಟೆ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರಿಗೆ ಸೇರಿದ 6 ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದವು. ಈ ಘಟನೆ ಮಾಸುವ ಮುನ್ನೆವೇ ಐದು ಹಸುಗಳು ಬಲಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ವಿಷಪ್ರಾಷನದಿಂದ ಜಾನುವಾರುಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.