ಕೊಳ್ಳೇಗಾಲ: ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಜಮೀನುಗಳು ಭಾನುವಾರ ನೀರಿನಿಂದ ಜಲಾವೃತವಾಗಿವೆ.
ಕಳೆದ ತಿಂಗಳಿನಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳ ಜನ ಈ ಬಾರಿಯು ಪ್ರವಾಹ ಭೀತಿ ಎದುರಿಸುವಂತಾಗಿದೆ.
ಮಲೆನಾಡಿನ ಜಿಲ್ಲೆಗಳಲ್ಲಿ ವರುಣ ನಿರಂತರ ಆರ್ಭಟಿಸುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ನೀರು ನಿರಂತರ ಹರಿದು ಬರುತ್ತಿದೆ. ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟೆಗಳಿಂದ 1.25 ಲಕ್ಷ ಕ್ಯುಸೆಕ್ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿದೆ. ಇದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನ ಈ ಬಾರಿಯು ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.
ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಕೆಳಭಾಗದಲ್ಲಿರುವ ತಾಲ್ಲೂಕಿನ ಕೆಲವು ನದಿ ಪಾತ್ರದ ಜನ ಪ್ರತಿ ವರ್ಷ ಪ್ರವಾಹ ಭೀತಿ ಎದುರಿಸುವಂತಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ, ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ, ಯಾವುದೇ ಕ್ಷಣದಲ್ಲಾದರೂ ಅಪಾಯದ ಮಟ್ಟ ಮೀರ ಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.
ಈಗಾಗಲೇ ಭತ್ತದ ಜಮೀನುಗಳು ಜಲಾವೃತವಾಗಿವೆ. ಸದ್ಯ, ರೈತರು ಬೆಳೆ ಕಟಾವು ಮಾಡಿಕೊಂಡಿದ್ದಾರೆ. ಇದೇ ರೀತಿ ನೀರು ಹೆಚ್ಚಾದರೆ ಗ್ರಾಮಗಳು ಮುಳುಗಡೆಯಾಗುವ ಅಪಾಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.