ADVERTISEMENT

ಶಿವರಾತ್ರಿ ಜಾತ್ರಾ ಮಹೋತ್ಸವ| ಕಾವೇರಿ ನದಿ ದಾಟಿ ಮಾದಪ್ಪನ ಸನ್ನಿಧಿಗೆ ಭಕ್ತರ ದಂಡು

25ರಿಂದ ಮಾರ್ಚ್‌ 1ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 14:40 IST
Last Updated 22 ಫೆಬ್ರುವರಿ 2025, 14:40 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.25ರಿಂದ ಆರಂಭವಾಗುವ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ತಾಲ್ಲೂಕಿನ ಬಸವನಕಡ ತಲುಪುತ್ತಿದ್ದಾರೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.25ರಿಂದ ಆರಂಭವಾಗುವ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ತಾಲ್ಲೂಕಿನ ಬಸವನಕಡ ತಲುಪುತ್ತಿದ್ದಾರೆ   

ಹನೂರು (ಚಾಮರಾಜನಗರ ಜಿಲ್ಲೆ): ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೇ 25ರಿಂದ ಆರಂಭವಾಗುವ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ಮಾದಪ್ಪನ ಕ್ಷೇತ್ರದತ್ತ ಸಾಗುತ್ತಿದ್ದಾರೆ.

ಬೆಂಗಳೂರು, ಕನಕಪುರ, ನೆಲಮಂಗಲ, ಮಾಗಡಿ, ಸಾತನೂರು, ಹಾರೋಹಳ್ಳಿ, ರಾಮನಗರ ಸೇರಿದಂತೆ ಹಲವು ಕಡೆಗಳಿಂದ ಆಗಮಿಸುತ್ತಿರುವ ಭಕ್ತರು ಕನಕಪುರ ತಾಲ್ಲೂಕಿನ ಗಡಿ ಮಾರ್ಗವಾಗಿ ಕಾವೇರಿ ನದಿ ದಾಟಿ ತಾಲ್ಲೂಕಿನ ಬಸವನಕಡ ಸ್ಥಳ ತಲುಪುತ್ತಿದ್ದಾರೆ. ಭಕ್ತರು ನದಿ ದಾಟಲು ಅನುವಾಗುವಂತೆ ನದಿಯ ನೀರಿನ ಹರಿವನ್ನು ತಗ್ಗಿಸಲಾಗಿದೆ.

ಉತ್ಸವ, ಜಾತ್ರೆಗಳ ವೇಳೆ ಭಕ್ತರು ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ಬರುವುದು ಸಾಮಾನ್ಯ. ಆದರೆ, ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಬರುವುದು ಹಾಗೂ ಕಾವೇರಿ ನದಿ ದಾಟಿ ದೇವರ ದರ್ಶನ ಪಡೆದು ಹರಕೆ ತೀರಿಸುವುದು ವಿಶೇಷ. 

ADVERTISEMENT

ಜಾತ್ರೆ ಆರಂಭಕ್ಕೆ ಇನ್ನೆರಡು ದಿನ ಉಳಿದಿರುವುದರಿಂದ, ಬಹಳಷ್ಟು ಭಕ್ತರು ಕಾವೇರಿ ನದಿ ದಾಟಿದ ಬಳಿಕ ತೀರದಲ್ಲಿ ರಾತ್ರಿ ತಂಗಿ ಮರುದಿನ ಬೆಳಿಗ್ಗೆ ಪಾದಯಾತ್ರೆ ಆರಂಭಿಸುತ್ತಿದ್ದಾರೆ. ಪಾದಯಾತ್ರೆ ಮಾರ್ಗದಲ್ಲಿ ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

‘ಚಿಕ್ಕ ವಯಸ್ಸಿನಿಂದಲೂ ತಂದೆಯೊಂದಿಗೆ ಪಾದಯಾತ್ರೆಯಲ್ಲಿ ಬರುವುದು ಅಭ್ಯಾಸವಾಗಿದ್ದು ಮುಂದುವರಿಸಿಕೊಂಡು ಬಂದಿದ್ದೇನೆ. ಎರಡು ವರ್ಷಗಳಿಂದ ಗ್ರಾಮಸ್ಥರೆಲ್ಲರೂ ಒಂದು ತಂಡವಾಗಿ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಕನಕಪುರ ತಾಲ್ಲೂಕಿನ ಬೆನಗೋಡು ಗ್ರಾಮದ ಮಹಾದೇವಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.