ADVERTISEMENT

ರಾಮ ಮಂದಿರಕ್ಕೆ ಭೂಮಿ ಪೂಜೆ: ಸಂಭ್ರಮಾಚರಣೆಗೆ ವಿಎಚ್‌ಪಿ ಕರೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 15:21 IST
Last Updated 3 ಆಗಸ್ಟ್ 2020, 15:21 IST

ಚಾಮರಾಜನಗರ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ರಾಮಮಂದಿರಕ್ಕೆ ಭೂಮಿ ಪೂಜೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಹಿಂದೂಗಳು ಹಬ್ಬದಂತೆ ಆಚರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕರೆ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿಯ ಮೈಸೂರು ವಿಭಾಗದ ಕಾರ್ಯದರ್ಶಿ ರಾ.ಸತೀಶ್‌ ಕುಮಾರ್ ಅವರು, ‘ಲಕ್ಷಾಂತರ ಶ್ರೀರಾಮ ಭಕ್ತರ ನಿರಂತರ ಹೋರಾಟ, ತ್ಯಾಗ –ಬಲಿದಾನಗಳ ಪರಿಣಾಮವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಶ್ರೀರಾಮ ಮಂದಿರ ನಮ್ಮ ರಾಷ್ಟ್ರಾಭಿಮಾನದ ಸಂಕೇತ. ರಾಮಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲ ಹಿಂದೂಗಳಿಗೆ ಹೆಮ್ಮೆ ಹಾಗೂ ಗೌರವದ ಸಂಕೇತ. ಭೂಮಿ ಪೂಜೆ ನಡೆಯುವ ದಿನವನ್ನು ಹಿಂದೂಗಳು ತಮ್ಮ ಮನೆಗಳಲ್ಲಿ ದೇವಸ್ಥಾನಗಳಲ್ಲಿ ಹಬ್ಬದಂತೆ ಸಂಭ್ರಮಿಸಬೇಕು’ ಎಂದು ಅವರು ಹೇಳಿದರು.

‘ಮನೆ, ದೇವಾಲಯಗಳಲ್ಲಿ ಭಗವಾಧ್ವಜ ಹಾರಿಸಬೇಕು. ರಂಗೋಲಿ, ತೋರಣ ಕಟ್ಟಿ ಶೃಂಗರಿಸಬೇಕು, ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ಮನೆಯಲ್ಲಿ ದೀಪ, ದೂಪ ಹಚ್ಚಿ, ಮೂರು ಬಾರಿ ಓಂಕಾರ ಹೇಳಿ, ಶಂಖ ಜಾಗಟೆ ಮೊಳಗಿಸಬೇಕು. ಶ್ರೀರಾಮ ತಾರಕ ಮಂತ್ರವನ್ನು (ಶ್ರೀರಾಮ ಜಯರಾಮ ಜಯ ಜಯ ರಾಮ) 13 ಬಾರಿ ಪಠಿಸಬೇಕು. ದೇವಾಲಯಗಳಲ್ಲಿ ರಾಮ ಮಂದಿರಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳನ್ನು ಹಮ್ಮಿಕೊಂಡು, ಭೂಮಿ ಪೂಜೆ ಕಾರ್ಯ ಸುಲಲಿತವಾಗಿ ನಡೆಯಲಿ ಎಂದು ಪ್ರಾರ್ಥಿಸಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ಶಿಲಾನ್ಯಾಸ ಕಾರ್ಯಕ್ರಮವು ವಾಹಿನಿಗಳಲ್ಲಿ ನೇರಪ್ರಸಾರವಾಗಲಿದ್ದು, ಹೆಚ್ಚು ಜನರು ಅದನ್ನು ವೀಕ್ಷಿಸುವುದರ ಮೂಲಕ, ಕಾರ್ಯಕ್ರಮವನ್ನು ಸಾಕ್ಷೀಕರಿಸಬೇಕು’ ಎಂದು ಸತೀಶ್‌ ಕುಮಾರ್ ಹೇಳಿದರು.

ವಿಎಚ್‌ಪಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಾಲಸುಬ್ರಹ್ಮಣ್ಯ, ಬಜರಂಗದಳದ ವೆಂಕಟೇಶ್‌, ಮುಖಂಡರಾದ ಪೃಥ್ವಿರಾಜ್‌, ನವೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.