ADVERTISEMENT

ವಕೀಲರ ರಕ್ಷಣೆ ಮಸೂದೆ ಅಂಗೀಕಾರ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 16:47 IST
Last Updated 24 ಫೆಬ್ರುವರಿ 2023, 16:47 IST
ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ–2023’ಯನ್ನು ವಿಧಾನಸಭೆ ಅಂಗೀಕರಿಸಿರುವುದಕ್ಕೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು
ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ–2023’ಯನ್ನು ವಿಧಾನಸಭೆ ಅಂಗೀಕರಿಸಿರುವುದಕ್ಕೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು   

ಚಾಮರಾಜನಗರ: ರಾಜ್ಯದಲ್ಲಿ ವಕೀಲರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿರುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ–2023’ಯನ್ನು ವಿಧಾನಸಭೆ ಅಂಗೀಕರಿಸಿರುವುದನ್ನು ಜಿಲ್ಲಾ ವಕೀಲರ ಸಂಘ ಸ್ವಾಗತಿಸಿದೆ.

ವಿಧಾನಸಭೆಯು ಮಸೂದೆ ಅಂಗೀಕರಿಸಿದ್ದಕ್ಕೆ ಶುಕ್ರವಾರ ವಕೀಲರು ಸಂಭ್ರಮಾಚರಣೆ ಮಾಡಿದರು. ಪರಸ್ಪರ ಸಿಹಿ ಹಂಚಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ‘ರಾಜ್ಯದಲ್ಲಿ ವಕೀಲರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೈದ್ಯರಿಗೆ ಇರುವ ಮಾದರಿಯಲ್ಲೇ ವಕೀಲರಿಗೂ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ನಿರಂತರವಾಗಿ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ADVERTISEMENT

‘ಕೆಲವು ಮಂತ್ರಿಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ನಮ್ಮ ಧಿಕ್ಕಾರ ಇರುತ್ತದೆ. ಒಬ್ಬ ವಕೀಲ ಒಬ್ಬ ವ್ಯಕ್ತಿಗೆ ಜೀವನವನ್ನೇ ರೂಪಿಸುತ್ತಾನೆ ಹಾಗೂ ವಕೀಲರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸಮಾಜದ ನೂರಾರು ಸಮಸ್ಯೆಗಳನ್ನು ತಿದ್ದವಂತಹವರು ವಕೀಲರು. ಅವರ ಮೇಲೆ ಹಲ್ಲೆ ಅಗುತ್ತಿರುವುದನ್ನು ಮನಗಂಡು ಸರ್ಕಾರ ಮಸೂದೆ ರೂಪಿಸಿ, ವಿಧಾನಸಭೆಯಲ್ಲಿ ಅಂಗೀಕಾರವನ್ನೂ ಪಡೆದಿದೆ. ಇದು ಅತ್ಯಂತ ಸಂತೋಷದ ವಿಚಾರ’ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ವಿರೂಪಾಕ್ಷ ಸ್ವಾಮಿ, ಉಪಾಧ್ಯಕ್ಷ ಮಂಜು ಹರವೆ, ಜಂಟಿ ಕಾರ್ಯದರ್ಶಿ ಮಲ್ಲು, ಪುಟ್ಟರಾಜು, ಆರ್.ವಿರೂಪಾಕ್ಷ, ನಾಗರಾಜೇಂದ್ರ, ನಾಗಮ್ಮ, ಸವಿತ, ಮಮತಾ, ಮಂಜುಳಾ, ಶಿವಲಿಂಗೇಗೌಡ, ಎಸ್.ಬಸವಣ್ಣ, ಸಿ.ಚಿನ್ನಸ್ವಾಮಿ ಸೇರಿದಂತೆ ಹಲವು ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.