ADVERTISEMENT

ಚಾಮರಾಜನಗರ ಜಿಲ್ಲಾಧಿಕಾರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಭಿನಂದನೆ

ಚಾಮರಾಜನಗರ: ಕೋವಿಡ್‌–19 ಮುಕ್ತ ಜಿಲ್ಲೆ, ಜಿಲ್ಲಾಧಿಕಾರಿಗೆ ಕೇಂದ್ರ ಆರೋಗ್ಯ ಸಚಿವ ಕರೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 13:22 IST
Last Updated 5 ಜೂನ್ 2020, 13:22 IST
ಡಾ.ಎಂ.ಆರ್‌.ರವಿ
ಡಾ.ಎಂ.ಆರ್‌.ರವಿ   

ಚಾಮರಾಜನಗರ: ಗಡಿ ಜಿಲ್ಲೆ ಇದುವರೆಗೂ ಕೋವಿಡ್‌–19 ಮುಕ್ತವಾಗಿರುವುದಕ್ಕೆ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ನಿಯಂತ್ರಣ ಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ಶ್ಲಾಘಿಸಿದ್ದಾರೆ.

ಗುರುವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅವರು, ‘ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಅಧಿಕಾರಿಗಳ ತಂಡ ಹಾಗೂ ಜಿಲ್ಲೆಯ ಜನತೆಗೆ ಅಭಿನಂದನೆ ತಿಳಿಸಿ’ ಎಂದು ಹೇಳಿದ್ದಾರೆ. ದೆಹಲಿಗೆ ಬಂದಾಗ ತಮ್ಮನ್ನು ಖುದ್ದಾಗಿ ಭೇಟಿ ಮಾಡುವಂತೆಯೂ ಜಿಲ್ಲಾಧಿಕಾರಿಗೆ ಹೇಳಿದ್ದಾರೆ.

ಅಚ್ಚರಿ, ಹೆಮ್ಮೆ: ಈ ಬಗ್ಗೆ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಡಾ.ಎಂ.ಆರ್.ರವಿ ಅವರು, ‘ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿದ್ದಾಗ ನವದೆಹಲಿಯಿಂದ ಕರೆ ಬಂತು. ಆರೋಗ್ಯ ಸಚಿವರ ಕಚೇರಿಯಿಂದ ಸಿಬ್ಬಂದಿ ಮಾತನಾಡಿದರು. ಸಚಿವರು ಮಾತನಾಡಬೇಕಂತೆ ಎಂದರು. ನನಗೊಂದು ಕ್ಷಣ ಅಚ್ಚರಿ. ಕರೆಯನ್ನು ನಿರೀಕ್ಷೆ ಮಾಡಿರಲಿಲ್ಲ. ‘ದೇಶದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಮೇಲೆ ನಿಗಾ ಇಟ್ಟಿದ್ದೇನೆ. ನೀವು ಅತ್ಯುತ್ತಮ ಕೆಲಸ ಮಾಡಿದ್ದೀರಿ’ ಎಂದು ಸಚಿವರು ಮೆಚ್ಚುಗೆ ಸೂಚಿಸಿದರು’ ಎಂದರು.

ADVERTISEMENT

‘ನನಗೆ ಆಶ್ಚರ್ಯದ ಜೊತೆಗೆ ಹೆಮ್ಮೆಯೂ ಆಯಿತು. ಕೇಂದ್ರ ಸರ್ಕಾರದ ಸಚಿವರೊಬ್ಬರು, ಅದರಲ್ಲೂ ಆರೋಗ್ಯ ಸಚಿವರೇ ಕರೆ ಮಾಡಿರುವುದು ಸಂತಸದ ವಿಚಾರ. ಈ ಎಲ್ಲ ಅಭಿನಂದನೆ, ಮೆಚ್ಚುಗೆ ಜಿಲ್ಲೆಯ ಜನರಿಗೆ ಅರ್ಪಣೆ. ಇದರಲ್ಲಿ ಎಲ್ಲರ ಪಾತ್ರವೂ ಇದೆ. ಜಿಲ್ಲೆಯನ್ನು ಶಾಶ್ವತವಾಗಿ ಹಸಿರು ವಲಯದಲ್ಲಿ ಮುಂದುವರಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಕೂಡ ಕೇಂದ್ರ ಸಚಿವರು ಕರೆ ಮಾಡಿರುವ ವಿಚಾರ ಪ್ರಸ್ತಾಪಿಸಿದರು.

‘ನಮ್ಮ ಜಿಲ್ಲೆ ಕೋವಿಡ್‌–19 ಮುಕ್ತ ಜಿಲ್ಲೆಯಾಗಿರುವ ಕಾರಣ ಕೇಂದ್ರ ಆರೋಗ್ಯ ಸಚಿವರು ದೂರವಾಣಿ ಮೂಲಕ ನಮ್ಮ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಶುಭ ಹಾರೈಸಿದ್ದಾರೆ ಮತ್ತು ನಮ್ಮ ಜಿಲ್ಲೆ ಇಡೀ ಭಾರತದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.