ADVERTISEMENT

ಹನೂರು: ವರ್ಷದಿಂದ ಬಿಲ್‌ ಬಾಕಿ: ಪಟ್ಟಣ ಪಂಚಾಯಿತಿಗೆ ವಿದ್ಯುತ್‌ ಕಟ್‌

₹12.91 ಲಕ್ಷದಲ್ಲಿ ₹6 ಲಕ್ಷ ಪಾವತಿ, ಮರು ಸಂಪರ್ಕ ನೀಡಿದ ಸೆಸ್ಕ್‌

ಬಿ.ಬಸವರಾಜು
Published 15 ಜೂನ್ 2021, 19:30 IST
Last Updated 15 ಜೂನ್ 2021, 19:30 IST
ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕ ಶೌಚಾಲಯವನ್ನು ಮುಚ್ಚಲಾಗಿತ್ತು
ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕ ಶೌಚಾಲಯವನ್ನು ಮುಚ್ಚಲಾಗಿತ್ತು   

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತ ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಮಂಗಳವಾರ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್) ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ, ಪಂಚಾಯಿತಿಯ ಕೆಲಸಗಳಿಗೆ ತೊಂದರೆಯಾಯಿತು.

ಪಟ್ಟಣ ಪಂಚಾಯಿತಿಯು ₹12.91 ಲಕ್ಷ ವಿದ್ಯುತ್‌ ಬಿಲ್‌ ವಾವತಿಸಿರಲಿಲ್ಲ. ಬಿಲ್‌ ಪಾವತಿಸುವಂತೆ ಸೆಸ್ಕ್‌ ಸೂಚಿಸಿತ್ತು. ಆ ಬಳಿಕವೂ ಪಾವತಿ ಮಾಡದೇ ಇದ್ದುದರಿಂದ ವಿದ್ಯುತ್‌ ಸರಬರಾಜನ್ನು ಸ್ಥಗಿತಗೊಳಿಸಿತು.ಇದರಿಂದಾಗಿ ಇ– ಸ್ವತ್ತು, ನಮೂನೆ 3, ತೆರಿಗೆ ಪಾವತಿ ಸೇರಿದಂತೆ ಇನ್ನಿತರೆ ಎಲ್ಲ ಸೇವೆಗಳು ಸ್ಥಗಿತಗೊಂಡವು. ಕೆಲಸದ ನಿಮಿತ್ತ ಪಟ್ಟಣ ಪಂಚಾಯಿತಿಗೆ ಬಂದ ಸಾರ್ವಜನಿಕರು ಕೆಲಸವಾಗದೇ ಹಿಂದಿರುಗಿದರು.

ಶೌಚಾಲಯಕ್ಕೆ ಬೀಗ: ಪಟ್ಟಣಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ವಿವಿಧ ಕೆಲಸಗಳಿಗಾಗಿ ನೂರಾರು ಜನರು ಬರುತ್ತಾರೆ. ಪಟ್ಟಣ ಪಂಚಾಯಿತಿ ಆಡಳಿತವು ನಾಲ್ಕು ವರ್ಷಗಳ ಹಿಂದೆ ಖಾಸಗಿ ಬಸ್ ನಿಲ್ದಾಣದ ಬಳಿ ಶೌಚಾಲಯವನ್ನು ನಿರ್ಮಿಸಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಆದರೆ ಮಂಗಳವಾರ ವಿದ್ಯುತ್ ಸರಬರಾಜು ಕಡಿತಗೊಂಡ ಪರಿಣಾಮ ನೀರು ಸರಬರಾಜಿಗೆ ತೊಡಕಾಯಿತು. ಇದರಿಂದ ಶೌಚಾಲಯಕ್ಕೆ ಬೀಗ ಹಾಕಬೇಕಾಯಿತು. ಇದರಿಂದಲೂ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಿದರು.

ADVERTISEMENT

ವಾಣಿಜ್ಯ ಮಳಿಗೆಯಲ್ಲೂ ವಿದ್ಯುತ್ ಕಡಿತ: ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿದ್ದರಿಂದ ವ್ಯಾಪಾರಕ್ಕೂ ತೊಂದರೆಯಾಯಿತು.

ಒಂದು ವರ್ಷದ ₹12.91 ಲಕ್ಷ ಬಿಲ್‌ ಬಾಕಿ ಇತ್ತು. ವಿದ್ಯುತ್‌ ಸಂಪರ್ಕ ಕಡಿಗೊಳಿಸಿದ ಬಳಿಕ ಪಟ್ಟಣ ಪಂಚಾಯಿತಿ ಆಡಳಿತ ₹6 ಲಕ್ಷ ಬಿಲ್‌ ಪಾವತಿಸಿದೆ. ಆ ನಂತರ ಸೆಸ್ಕ್‌, ವಿದ್ಯುತ್‌ ಸಂಪರ್ಕ ಕಲ್ಪಿಸಿದೆ.

20 ವರ್ಷದ ಕಂದಾಯ ಬಾಕಿ!
ಈ ಮಧ್ಯೆ, ಸೆಸ್ಕ್‌, 20 ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಕಂದಾಯ ಪಾವತಿ ಮಾಡಿಲ್ಲ ಎಂಬುದು ಗೊತ್ತಾಗಿದೆ.

‘ಸೆಸ್ಕ್ ಕಚೇರಿ ಆವರಣದೊಳಗೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮತ್ತು ನಕ್ಷೆ ಮಂಜೂರಾತಿ ಮುಂತಾದ ದಾಖಲೆಗಳನ್ನು ಕಚೇರಿಗೆ ಒದಗಿಸುವಂತೆ ಸೆಸ್ಕ್‌ಗೆ ನೋಟೀಸ್ ನೀಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹನೂರು ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಂಕರ್‌ ಅವರು, ‘ಪಂಚಾಯಿತಿ ಅಧಿಕಾರಿಗಳು ಕಂದಾಯ ಕಟ್ಟಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಇದುವರೆಗೆ ಎಷ್ಟು ಕಂದಾಯ ಕಟ್ಟಬೇಕು ಎಂಬುದರ ಬಗ್ಗೆ ನೋಟಿಸ್ ನೀಡಿಲ್ಲ. ನೋಟಿಸ್ ನೀಡಿದರೆ ಕಂದಾಯ ಕಟ್ಟಲು ಕ್ರಮವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.