ADVERTISEMENT

ಶಿಕ್ಷಕರ ನೇಮಕಾತಿ ಪರೀಕ್ಷೆ: ಚಾಮರಾಜನಗರದಲ್ಲಿ 1,306 ಮಂದಿ ಹಾಜರು

​ಪ್ರಜಾವಾಣಿ ವಾರ್ತೆ
Published 21 ಮೇ 2022, 13:16 IST
Last Updated 21 ಮೇ 2022, 13:16 IST
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ಪದವೀಧರ ಶಿಕ್ಷಕರ ನೇಮಕಾತಿಗಾಗಿ ಶಿಕ್ಷಣ ಇಲಾಖೆ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಶನಿವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ ನಗರದಲ್ಲಿ ಎರಡು ಪರೀಕ್ಷೆಗಳು ನಡೆದಿವೆ.

ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿವೆ. ಬೆಳಿಗ್ಗೆ ಸಾಮಾನ್ಯ ಅಧ್ಯಯನ ವಿಷಯ (ಪತ್ರಿಕೆ–1) ಪರೀಕ್ಷೆ ನಡೆದಿದ್ದರೆ, ಮಧ್ಯಾಹ್ನ ಮೇಲೆ ಅಭ್ಯರ್ಥಿಗಳು ಇಂಗ್ಲಿಷ್‌ ವಿಷಯದ (ಪತ್ರಿಕೆ–2) ಪರೀಕ್ಷೆ ಎದುರಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗಾಗಿ 1,844 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,306 ಮಂದಿ ಸಾಮಾನ್ಯ ಅಧ್ಯಯನ ಪರೀಕ್ಷೆ ಬರೆದಿದ್ದಾರೆ. 538 ಮಂದಿ ಗೈರಾಗಿದ್ದಾರೆ.

ADVERTISEMENT

ಮಧ್ಯಾಹ್ನ ಮೇಲೆ ನಡೆದ ಇಂಗ್ಲಿಷ್‌ ವಿಷಯದ ಪರೀಕ್ಷೆಗೆ 403 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ‍ಪೈಕಿ 104 ಮಂದಿ ಗೈರಾಗಿದ್ದಾರೆ. 291 ಜನರು ಪರೀಕ್ಷೆ ಬರೆದಿದ್ದಾರೆ.

ಭಾನುವಾರ (ಮೇ 22) ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಪರೀಕ್ಷೆಗಳು ನಡೆಯಲಿವೆ. ಬೆಳಗಿನ ಅವಧಿಯಲ್ಲಿ ಗಣಿತ ಮತ್ತು ಜೀವ ವಿಜ್ಞಾನ/ಜೀವ ವಿಜ್ಞಾನ/ಸಮಾಜ ಪಾಠ ವಿಷಯದ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಮಾಧ್ಯಮ ಭಾಷಾ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

‘ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಎಲ್ಲೂ ಗೊಂದಲವಾಗಿಲ್ಲ. ಅಭ್ಯರ್ಥಿಗಳು ಹಲವು ಕಡೆಗಳಲ್ಲಿ ಅರ್ಜಿ ಸಲ್ಲಿಸಿದ್ದರೂ, ಯಾವುದಾದರೂ ಒಂದು ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹಾಗಾಗಿ, ಗೈರಾದವರ ಸಂಖ್ಯೆ ಹೆಚ್ಚಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎನ್‌.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಎಲ್ಲ ಎಂಟು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಳಿಗಿರಿರಂಗನ ಬೆಟ್ಟ ರಸ್ತೆಯ ಜೆಎಸ್‌ಎಸ್ ಬಾಲಕರ ಶಾಲೆ, ಬಾಲಕಿಯರ ಪ್ರೌಢಶಾಲೆ, ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ಸಿದ್ದಾರ್ಥನಗರದ ಸಂತ ಜೋಸೆಫರ ಪ್ರೌಢಶಾಲೆ, ಸೋಮವಾರಪೇಟೆಯ ಎಂ.ಸಿ.ಎಸ್ ಪ್ರೌಢಶಾಲೆ, ಕರಿನಂಜನಪುರದ ಯೂನಿವರ್ಸಲ್ ಪ್ರೌಢಶಾಲೆ ಮತ್ತು ಚನ್ನಿಪುರ ಮೋಳೆ ರಸ್ತೆಯಲ್ಲಿರುವ ಸೇವಾ ಭಾರತಿ ಪ್ರಾಥಮಿಕ ಇಂಗ್ಲಿಷ್‌ ಶಾಲೆಗೆ ಭೇಟಿ ನೀಡಿ ಕೇಂದ್ರಗಳಮುಖ್ಯ ಸೂಪರಿಂಟೆಂಡೆಂಟ್‌ ಹಾಗೂ ಕೇಂದ್ರದ ನಿಯಂತ್ರಕರಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.