ಚಾಮರಾಜನಗರ: ಸಿಇಟಿ, ನೀಟ್, ಜೆಇಇ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಪಡೆಯಲು ಪೂರಕವಾಗಿ ನಗರದ ಸೇವಾಭಾರತಿ ಕಾಲೇಜಿನಲ್ಲಿ ಶಾರದಾ ಅಕಾಡೆಮಿಯ ವತಿಯಿಂದ ನೀಡಲಾಗುತ್ತಿರುವ ತರಬೇತಿಯನ್ನು ಸ್ಥಗಿತಗೊಳಿಬಾರದು ಎಂದು ಒತ್ತಾಯಿಸಿ ಗುರುವಾರ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉದ್ಯೋಗಾವಕಾಶಗಳು ಹೆಚ್ಚಾಗಿರುವ ಕೋರ್ಸ್‌ಗಳಿಗೆ ಪ್ರವೇಶಾತಿ ಸಿಗಬೇಕು ಎಂಬ ಉದ್ದೇಶದಿಂದ ದುಬಾರಿ ಶುಲ್ಕ ಪಾವತಿಸಿ ಕಾಲೇಜಿಗೆ ಮಕ್ಕಳನ್ನು ದಾಖಲಾತಿ ಮಾಡಿದ್ದೇವೆ. ಆದರೆ, ಕಾಲೇಜಿನ ಆಡಳಿತ ಮಂಡಳಿ ಏಕಾಏಕಿ ಶಾರದಾ ಅಕಾಡೆಮಿಯ ಜೊತೆಗಿನ ಒಪ್ಪಂದ ಮುರಿದುಕೊಳ್ಳಲು ಮುಂದಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಶಾರದಾ ಅಕಾಡೆಮಿಯಿಂದ ಗುಣಮಟ್ಟದ ತರಬೇತಿ ಸಿಗುತ್ತದೆ ಎಂಬ ಕಾರಣಕ್ಕೆ ಮಕ್ಕಳನ್ನು ಕಾಲೇಜಿಗೆ ದಾಖಲಾತಿ ಮಾಡಿದ್ದೇವೆ. ಅಕಾಡೆಮಿ ಜೊತೆಗಿನ ಒಪ್ಪಂದ ರದ್ದಾದರೆ ಪಾಠ–ಪ್ರಚನಗಳಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎರಡು ಸಂಸ್ಥೆಗಳ ನಡುವಿನ ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದರು.
ಪೋಷಕರ ಮನವಿಗೆ ಸ್ಪಂದಿಸದಿದ್ದರೆ ಕಾಲೇಜು ಆಡಳಿತ ಮಂಡಳಿಗೆ ಪಾವತಿಸಿರುವ ಶುಲ್ಕವನ್ನು ಸಂಪೂರ್ಣ ವಾಪಸ್ ನೀಡಬೇಕು, ಇಚ್ಛಿಸಿದ ಕಾಲೇಜುಗಳಲ್ಲಿ ಮಕ್ಕಳಿಗೆ ದಾಖಲಾತಿ ಕೊಡಿಸಬೇಕು ಎಂದು ಪಟ್ಟು ಹಿಡಿದರು.
ಗೊಂದಲಗಳ ಕುರಿತು ಶಾರದಾ ಅಕಾಡೆಮಿ ಮುಖ್ಯಸ್ಥ ಸತೀಶ್ ಮಾತನಾಡಿ, ಸಿಇಟಿ, ನೀಟ್ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ತರಬೇತಿ ನೀಡಲು ಸೇವಾಭಾರತಿ ಶಿಕ್ಷಣ ಸಂಸ್ಥೆಯ ಜೊತೆಗೆ ಶಾರದಾ ಅಕಾಡೆಮಿ 7 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ಸಂಸ್ಥೆಯ 11 ಉಪನ್ಯಾಸಕರು ಮೂರೂವರೆ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದೀಗ ಏಕಾಏಕಿ ಕಾಲೇಜು ಆಡಳಿತ ಮಂಡಳಿ ಸಂಸ್ಥೆಯ ಜೊತೆಗಿನ ಒಪ್ಪಂದ ಕಡಿತಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಕಾಲೇಜು ಆಡಳಿತ ಮಂಡಳಿ ಸದಸ್ಯ ಬಾಲಸುಬ್ರಹ್ಮಣ್ಯ ಮಾತನಾಡಿ, ಸಿಇಟಿ, ನೀಟ್, ಜೆಇಇಗೆ ತರಬೇತಿ ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಲು ಶಾರದಾ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಂಡು ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪೂರ್ಣ ಪ್ರಮಾಣದ ಸಿಇಟಿ ತರಬೇತಿ ನೀಡಲಾಗುತ್ತಿದೆ.
ಈ ಮಧ್ಯೆ ಅಕಾಡೆಮಿ ನಿಲುವುಗಳು ಆಡಳಿತ ಮಂಡಳಿಯ ಧೋರಣೆಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿರುದ್ಧವಾಗಿವೆ. ಪಿಯು ಮಂಡಳಿಗೆ ಅಕಾಡೆಮಿಯ ಉಪನ್ಯಾಸಕರ ವಿದ್ಯಾರ್ಹತೆ, ಅಂಕಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದ್ದರೂ ಪಾಲಿಸಿಲ್ಲ. ಅಸಲಿಗೆ ಟ್ರಸ್ಟ್ ನೋಂದಣಿ ಮಾಡಿಸಿಕೊಂಡಿರಲಿಲ್ಲ ಎಂದು ಆರೋಪಿಸಿದರು.
ಈ ಸಂಬಂಧ ಜುಲೈ 19ರಂದು ಸಭೆ ಕರೆಯಲಾಗಿದ್ದು ಅಕಾಡೆಮಿಯ ಮುಖ್ಯಸ್ಥರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಸ್ಥೆ ಜೊತೆಗಿನ ಒಪ್ಪಂದ ರದ್ದಾದರೆ ಕೂಡಲೇ ಬೋಧನೆಗೆ ಬದಲಿ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು. ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಗೊಂದಲಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗಬೇಕು ಏಕಾಏಕಿ ಸಿಇಟಿ ತರಬೇತಿ ನಿಲ್ಲಿಸಿದರೆ ನಮ್ಮ ಭ್ವವಿಷ್ಯ ಹಾಳಾಗುತ್ತದೆ. ಶಾರದಾ ಅಕಾಡೆಮಿಯಿಂದ ತರಬೇತಿ ಮುಂದುವರಿಸಬೇಕು.–ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.