ADVERTISEMENT

20 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಯಲಕ್ಕೂರು ಹಾಗೂ ಕುದೇರು ರಸ್ತೆಯ‌ಲ್ಲಿ ಘಟನೆ, ವಿಶೇಷ ತನಿಖಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:18 IST
Last Updated 26 ಮೇ 2020, 17:18 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಜೆ.ಮೋಹನ್‌ ಇದ್ದಾರೆ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಜೆ.ಮೋಹನ್‌ ಇದ್ದಾರೆ   

ಸಂತೇಮರಹಳ್ಳಿ: ಹೋಬಳಿಯಯಲಕ್ಕೂರು ಹಾಗೂ ಕುದೇರು ಮಾರ್ಗದಲ್ಲಿ ಮಂಗಳವಾರ ಮುಂಜಾನೆ ಕುಟುಂಬ ಸಮೇತ ವಾಯು ವಿಹಾರ ನಡೆಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ.

ರಕ್ಷಣೆಗಾಗಿ ಬಂದ ಮಹಿಳೆಯ ಪತಿಯ ಮೇಲೆ ಆರೋಪಿಗಳು ಮಚ್ಚಿನಿಂದ ಹೊಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಲಕ್ಕೂರು ಗ್ರಾಮದ ಮಹದೇವಮ್ಮ ಉರುಫ್‌ ತಾಯಮ್ಮ ಇವರು ತಮ್ಮ ಪತಿ ಮರಿಸ್ವಾಮಿ ಹಾಗೂ ಇಬ್ಬರು ಸೊಸೆಯರೊಂದಿಗೆ ತಮ್ಮ ಗ್ರಾಮ ಯಲಕ್ಕೂರಿನಿಂದ ಕುದೇರು ಮಾರ್ಗದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.

ADVERTISEMENT

ಈಸಂದರ್ಭದಲ್ಲಿ ಪಲ್ಸರ್ ಬೈಕಿನಲ್ಲಿ ಬಂದ, ಮುಖಗವಸು ಧರಿಸಿದ್ದ ಮೂವರು ಮಹದೇವಮ್ಮ ಅವರ ಕತ್ತಿನಲ್ಲಿದ್ದ 20 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗುತ್ತಿದ್ದಾಗ ಮರಿಸ್ವಾಮಿ ತಡೆಯಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಕಳ್ಳರು ಮರಿಸ್ವಾಮಿ ಅವರ ಕೈಗೆ ಮಚ್ಚಿನಲ್ಲಿ ಹೊಡೆದು ಪರಾರಿಯಾಗಿದ್ದಾರೆ. ಮರಿಸ್ವಾಮಿ ಅವರ ಕೈಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುದೇರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ ಕಳೆದುಕೊಂಡ ಮಹಿಳೆ ಹಾಗೂ ಕುಟುಂಬದವರೊಂದಿಗೂ ಮಾತನಾಡಿದ್ದಾರೆ.

‘ಬೈಕ್‌ನಲ್ಲಿ ಬಂದಿದ್ದವರು ಕನ್ನಡದಲ್ಲೇ ಮಾತನಾಡಿದ್ದಾರೆ. ಹಾಗಾಗಿ, ಅವರು ಸ್ಥಳೀಯರೇ ಆಗಿದ್ದಾರೆ. ಘಟನೆ ನಡೆದ ತಕ್ಷಣ ನಾಕಾಬಂದಿ ಹಾಕಿದ್ದೆವು. ಅವರು ಎಲ್ಲೂ ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಲಭ್ಯವಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಚ್‌.ಡಿ.ಆನಂದ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ಸಂಪಾದನೆ ಇಲ್ಲದೆ ಇದ್ದ ದುಷ್ಕರ್ಮಿಗಳು ಈಗ ದುಡ್ಡಿಗಾಗಿ ಇಂತಹ ಅಪರಾಧ ಕೃತ್ಯಕ್ಕೆ ಕೈಹಾಕುವ ಸಾಧ್ಯತೆ ಇದೆ. ಹಾಗಾಗಿ ಜನರು ಹೆಚ್ಚು ಜಾಗರೂಕರಾಗಿರಬೇಕು’ ಎಂದು ಅವರು ಹೇಳಿದರು.

ಎಚ್ಚರಿಕೆ ವಹಿಸಲು ಜನರಿಗೆ ಸಲಹೆ
ಜನರು ಹೊರಗಡೆ ಓಡಾಡುವಾಗಪಾಲಿಸಬೇಕಾದ ಎಚ್ಚರಿಕೆ ಕ್ರಮಗಳನ್ನುಜಿಲ್ಲಾ ಪೊಲೀಸ್‌ನ ಫೇಸ್‌ಬುಕ್‌ ಪುಟದಲ್ಲಿ ಎಚ್‌.ಡಿ.ಆನಂದ ಕುಮಾರ್‌ ಅವರು ವಿವರಿಸಿದ್ದಾರೆ.

‘ಬೆಳಿಗ್ಗೆ ಬೆಳಕು ಹರಿದ ನಂತರ ಮನೆಯಿಂದ ಹೊರಡಿ. ಸಾಯಂಕಾಲ ಕತ್ತಲೆಗೂ ಮೊದಲೇ ವಾಕಿಂಗ್ ಮುಗಿಸಿ. ಹೆಚ್ಚು ಆಭರಣಗಳನ್ನು ಧರಿಸಬೇಡಿ. ಹೊರಗಡೆ ಹೋಗುವಾಗ ದುಬಾರಿ ಮೊಬೈಲ್ ಬಳಸದಿರುವುದು ಒಳಿತು.ಏಕಾಂಗಿಯಾಗಿ ಹೋಗಬೇಡಿ. ಅಂತರ ಕಾಯ್ದುಕೊಂಡು ಗುಂಪಾಗಿ ಹೋಗಿ. ಪೊಲೀಸ್ ಠಾಣೆ ನಂಬರ್ ನಿಮ್ಮ ಬಳಿ ಇರಲಿ.ಮೊಬೈಲ್‌ನಲ್ಲಿ ಮೊದಲೇ ಒಮ್ಮೆ ಠಾಣೆ ಅಥವಾ ನಿಮ್ಮ ಮನೆಯವರ, ಸ್ನೇಹಿತರ ನಂಬರ್‌ಗೆ ಕರೆ ಮಾಡಿ, ತುರ್ತು ಸಂದರ್ಭದಲ್ಲಿ ಸುಲಭವಾಗಿ ಕರೆ ಮಾಡಲು ಅನುವಾಗುವ ಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಅಪರಿಚಿತರು ಹಿಂಬಾಲಿಸಿದಂತೆ ಎಚ್ಚರ ವಹಿಸಿ.ಅನುಮಾನ ಬಂದ ತಕ್ಷಣ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ಕರೆಮಾಡಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.