ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು ಸುಮಲತಾ, ಎಚ್‌ಡಿಕೆ ಬೀದಿ ಜಗಳ: ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ ಅಕ್ರಮ ಗಣಿಗಾರಿಕೆ: ಸುಮಲತಾ, ಕುಮಾರಸ್ವಾಮಿ ನಡುವೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 10:37 IST
Last Updated 8 ಜುಲೈ 2021, 10:37 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಚಾಮರಾಜನಗರ: ‘ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ವೈಫಲ್ಯ, ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ಅಕ್ರಮ ಗಣಿಗಾರಿಕೆ, ಕೆಆರ್‌ಎಸ್‌ ಅಣೆಕಟ್ಟು ವಿಚಾರವನ್ನು ಮುಂದಿಟ್ಟುಕೊಂಡು ಬೀದಿ ಜಗಳ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಅವರು ಗುರುವಾರ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ. ಯಾವುದು ಅಕ್ರಮ, ಸಕ್ರಮ, ಕೆಆರ್‌ಎಸ್‌ಗೆ ಹಾನಿ ವಿಚಾರ ಮೂರ್ನಾಲ್ಕು ವರ್ಷಗಳಿಂದ ಪ್ರಸ್ತಾಪವಾಗುತ್ತಿದೆ. ಇಂತಹ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡಬಾರದು. ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಆಗುವ ಹಾನಿಯ ಬಗ್ಗೆ ಅಧ್ಯಯನ ನಡೆಸಿ, ನಿರ್ದಿಷ್ಟ ಪ್ರದೇಶದಲ್ಲಿರುವ ಕ್ರಷರ್‌, ಕಲ್ಲಿನ ಗಣಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ಜಿಲ್ಲೆ ಹಾಗೂ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸುಮಲತಾ ಹಾಗೂ ಜೆಡಿಎಸ್‌ ಮುಖಂಡರು ಬೀದಿ ಜಗಳ ಮಾಡುವುದು ಗೌರವ ತರುವಂತಹದ್ದಲ್ಲ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ವಿಚಾರ, ಮನ್‌ಮುಲ್‌ ಹಗರಣ ಸೇರಿದಂತೆ ಹಲವು ಗಂಭೀರ ವಿಷಯಗಳಿವೆ. ಇಂತಹ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಿ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಕ್ಕರೆ ಕಾರ್ಖಾನೆ ಉಳಿಸುವಂತಹ‌ ಕೆಲಸವನ್ನು ಮಾಡಬೇಕು’ ಎಂದರು.

ADVERTISEMENT

‘ಜನರ ಹಿತಾಸಕ್ತಿಗಳ ಬಗ್ಗೆ ಗಮನ ಕೊಡುವುದು ಬಿಟ್ಟು, ನಮ್ಮ ಶಕ್ತಿ ಇಷ್ಟು ಎಂದು ಜಗಳವಾಡುವುದು ಎಷ್ಟು ಸರಿ? ಕೋವಿಡ್‌ನಿಂದಾಗಿ ಜನರು ಕಷ್ಟದಲ್ಲಿದ್ದಾರೆ. ಅವರ ಬಗ್ಗೆ ಇವರು ಗಮನ ಹರಿಸಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಚಲುವರಾಯಸ್ವಾಮಿ ಅವರು, ‘ಇದೇನೂ ಹೊಸತಲ್ಲ. ಜನರ ಹಿತಾಸಕ್ತಿಗಳು ಇವರಿಗೆ ಬೇಕಾಗಿಲ್ಲ. ಜನರನ್ನು ದಾರಿ ತಪ್ಪಿಸುವುದಕ್ಕೆ ಇಂತಹದ್ದೆಲ್ಲವನ್ನು ಮಾಡುತ್ತಲೇ ಇರುತ್ತಾರೆ. ತಾತ್ಕಾಲಿಕ ರಾಜಕಾರಣ ಮಾಡಿ ಲಾಭ ಗಳಿಸುವುದು ಅವರ ಕ್ರಮ’ ಎಂದರು.

ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿಬಿಐ ತನಿಖೆ ಮಾಡಬೇಡಿ ಅಂತ ಹೇಳಲು ನಾನ್ಯಾರು? ಸಿಬಿಐ ತನಿಖೆ ಆಗುತ್ತಿದ್ದರೆ ಆಗಲಿ. ಆದರೆ, ಸಿಬಿಐ ತನಿಖೆ ಮಾಡುವಂತಹ ಪ್ರಕರಣ ಮನ್‌ಮುಲ್‌ ಹಗರಣ ಇದೆ. ಅದರ ತನಿಖೆಯೂ ಮಾಡಲಿ. ಯಾವ ತನಿಖೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.