ADVERTISEMENT

ಭಾರತ ಬಂದ್| ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ, ವಿರೋಧ ಪಕ್ಷಗಳ ಬೆಂಬಲ

ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌, ಜಿಲ್ಲಾ ಕೇಂದ್ರದಿಂದ ಸಂಚರಿಸದ ಕೆಎಸ್‌ಆರ್‌ಟಿಸಿ ಬಸ್‌ಗಳು, ಜನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 12:40 IST
Last Updated 8 ಡಿಸೆಂಬರ್ 2020, 12:40 IST
ಪ್ರತಿಭಟನಕಾರರು ಟೈರ್‌ ಸುಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನಕಾರರು ಟೈರ್‌ ಸುಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಚಾಮರಾಜನಗರ: ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ರಾಷ್ಟ್ರದಾದ್ಯಂತ ರೈತ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರೈತ, ದಲಿತ, ಪ್ರಗತಿಪರ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟವು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಚಾಮರಾಜನಗರ ಸ್ವಯಂ ಪ‍್ರೇರಿತ ಬಂದ್‌ ಆಚರಿಸಲು ನಿರ್ಧರಿಸಿದ್ದವು. ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಎಸ್‌ಪಿ, ಎಸ್‌ಡಿಪಿಐಗಳು ಕೂಡ ಬಂದ್‌ಗೆ ಬೇಷರತ್‌ ಬೆಂಬಲ ಘೋಷಿಸಿದ್ದವು.

ಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮಾತ್ರ ಬಂದ್‌ ಆಚರಿಸಲಾಯಿತು. ಉಳಿದ ಕಡೆಗಳಲ್ಲಿ ವ್ಯಾಪಾರ ವಹಿವಾಟು, ಜನಜೀವನ ಎಂದಿನಂತೆಯೇ ಇತ್ತು. ಕೊಳ್ಳೇಗಾಲ ಮತ್ತು ಹನೂರು ಹಾಗೂ ಮಹದೇಶ್ವರ ಬೆಟ್ಟದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ADVERTISEMENT

ಉತ್ತಮ ಪ್ರತಿಕ್ರಿಯೆ

ಭಾರತ ಬಂದ್‌ ಬೆಂಬಲಿಸಿ, ರೈತ, ದಲಿತ, ಪ್ರಗತಿಪರ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟವು ಕರೆ ನೀಡಿದ್ದಚಾಮರಾಜನಗರ ಸ್ವಯಂ ಪ್ರೇರಿತ ಬಂದ್‌ಗೆ (ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ)ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವು ಅಂಗಡಿಗಳ ಮಾಲೀಕರು ಬೆಳಿಗ್ಗೆಯಿಂದಲೇ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರೆ, ಇನ್ನೂ ಕೆಲವರು ತೆರೆದರು. ಆದರೆ, ನಂತರ ಪ್ರತಿಭಟನಕಾರರು ಅಂಗಡಿಗಳನ್ನು ಮುಚ್ಚಿಸಿದರು. ಬಿಜೆಪಿ ಬೆಂಬಲಿಗರು ಹಾಗೂ ಮುಖಂಡರು ಅಂಗಡಿಗಳನ್ನು ಬಂದ್‌ ಮಾಡಿರಲಿಲ್ಲ. ಇನ್ನೂ ಕೆಲವರು ಅರ್ಧ ಬಾಗಿಲು ಹಾಕಿಕೊಂಡು ವಹಿವಾಟು ನಡೆಸಿದರು. ಆಸ್ಪತ್ರೆ, ಮೆಡಿಕಲ್‌ಗಳು, ಹಾಲಿನ ಕೇಂದ್ರಗಳು ತೆರೆದಿದ್ದವು.

ಜನರ ಓಡಾಟ ವಿರಳವಾಗಿತ್ತು. ಖಾಸಗಿ ಬಸ್‌ಗಳು, ಆಟೊಗಳು ಟ್ಯಾಕ್ಸಿಗಳು ಸಂಚರಿಸಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಸಾರ್ವಜನಿಕರು ಇರಲಿಲ್ಲ. ಬೆಳಿಗ್ಗೆ ಬ್ಯಾಂಕ್‌ಗಳು ತೆರೆದಿದ್ದವಾದರೂ, ನಂತರ ಬಾಗಿಲು ಹಾಕಿದವು. ಸಿಬ್ಬಂದಿ ಬ್ಯಾಂಕ್‌ ಕೆಲಸ ಮಾಡಿದರು. ಗ್ರಾಹಕರಿಗೆ ಸೇವೆ ಲಭ್ಯವಾಗಲಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಸಂಚರಿಸಿತಾದರೂ ನಂತರ ಪ್ರತಿಭಟನಕಾರರು ಬಸ್‌ಗಳನ್ನು ತಡೆದರು. ಆ ಬಳಿಕ, ಸಂಚಾರ ಸ್ಥಗಿತಗೊಂಡಿತು. ಜಿಲ್ಲಾ ಕೇಂದ್ರದಿಂದ ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಸೇರಿದಂತೆ ಯಾವ ಕಡೆಗಳಿಗೂ ಬಸ್‌ ಸಂಚರಿಸಲಿಲ್ಲ. ಬೇರೆ ಊರುಗಳಿಗೆ ತೆರಳುವುದಕ್ಕಾಗಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೇ ನಿರಾಸೆ ಅನುಭವಿಸಿದರು. ತಾಲ್ಲೂಕು ಕೇಂದ್ರಗಳಿಂದ ನಗರಕ್ಕೆ ಬಸ್‌ಗಳು ಇರಲಿಲ್ಲ. ಬೇರೆ ಕಡೆಗಳಿಗೆ ಎಂದಿನಂತೆ ಸಂಚರಿಸಿದವು.

ಅಸ್ವಸ್ಥ

ಮೈಸೂರಿನ ಜಯದೇವ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಹೊರಟಿದ್ದ ವ್ಯಕ್ತಿಯೊಬ್ಬರು ಬಸ್‌ ನಿಲ್ದಾಣದಲ್ಲಿ ಕುಸಿದು ಬಿದ್ದ ಪ್ರಸಂಗವೂ ನಡೆಯಿತು. ತಕ್ಷಣ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌, ಅವರನ್ನು ತಮ್ಮ ವಾಹನದಲ್ಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಅವರು ಆಂಬುಲೆನ್ಸ್‌ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಲಾಯಿತು.

ಪ್ರತಿಭಟನೆ

ರೈತ, ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಬೆಳಿಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಡಿವೀಯೇಷನ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬೆಂಬಲ ನೀಡಿದ ವಿರೋಧ ಪ‍ಕ್ಷಗಳು

ಬಂದ್‌ಗೆ ಕಾಂಗ್ರೆಸ್‌, ಎಸ್‌ಡಿಪಿಐ, ಬಿಎಸ್‌ಪಿ ಕೂಡ ಕೈಜೋಡಿಸಿದ್ದವು. ಮೂರೂ ಪಕ್ಷಗಳ ಮುಖಂಡರು ಕೂಡ ಬಸ್‌ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾವನ್ನೂ ಕೈಗೊಂಡರು. ತೆರೆದಿದ್ದ ಅಂಗಡಿಗಳನ್ನು ಮುಚ್ಚುವಂತೆ ಮಾಲೀಕರನ್ನು ಮನವೊಲಿಸಲೂ ಯತ್ನಿಸಿದರು. ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಆರ್.ಧ್ರುವನಾರಾಯಣ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲಾಗುವುದು ಎಂದು ಹೇಳುತ್ತಾ, ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸಿ, ಎಲ್ಲವನ್ನೂ ಖಾಸಗೀಕರಣ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಯಾವುದೇ ಕಾಯ್ದೆಯನ್ನು ಜಾರಿಗೆ ತರಬೇಕಾದರೆ ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ವಿಸ್ತೃತ ಚರ್ಚೆಯಾಗಬೇಕು. ರೈತಪರ, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದು ಅವರೊಂದಿಗೆ ಸಂವಾದ ನಡೆಸಬೇಕು. ಅದ್ಯಾವುದನ್ನೂ ಮಾಡದೆ ಕೋವಿಡ್‌ ಸಮಯವನ್ನು ದುರ್ಬಳಕೆ ಮಾಡಿಕೊಂಡು ಏಕಾಏಕಿ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ತಿದ್ದುಪಡಿಯಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಈಗಾಗಲೇ ಲಕ್ಷಾಂತರ ರೈತರು ಹೋರಾಟ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳೂ ಬೆಂಬಲ ವ್ಯಕ್ತಪಡಿಸಿವೆ. ಬಂಡವಾಳಶಾಹಿಗಳು, ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಈ ಕಾಯ್ದೆಗಳನ್ನು ವಾಪಸ್‌ ಪಡೆಯುವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಧ್ರುವನಾರಾಯಣ ಅವರು ಹೇಳಿದರು.

ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಅಬ್ರಾರ್‌ ಅಹಮದ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ರೈತ ಸಂಘದ ಮತ್ತೊಂದು ಬಣದ ಮೈಸೂರು–ಚಾಮರಾಜನಗರ ಪ್ರಾಂತ್ಯದ ಕಾರ್ಯದರ್ಶಿ ಮಹೇಶ್‌ ಪ್ರಭು ಸೇರಿದಂತೆ ಹಲವರು ಮಾತನಾಡಿದರು.

ಪಿಯುಸಿಎಲ್‌ನ ರಾಜ್ಯ ಕಾರ್ಯದರ್ಶಿ ಕೆ.ವೆಂಕಟರಾಜು, ಪ್ರಗತಿಪರ ಸಂಘಟನೆಗಳ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಕಾಂಗ್ರೆಸ್‌, ಎಸ್‌ಡಿಪಿಐ, ಬಿಎಸ್‌ಪಿ, ರೈತ ಸಂಘಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.