ADVERTISEMENT

ಚಾಮರಾಜನಗರ | ಬಿಳಿಗಿರಿರಂಗನ ಬೆಟ್ಟದಲ್ಲಿ ಬಸ್‌ ಪಲ್ಟಿ: 26 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 11:05 IST
Last Updated 1 ಜೂನ್ 2024, 11:05 IST
   

ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಗವಿ ಬೋರೆ ಬಳಿ ಖಾಸಗಿ ಬಸ್ಸೊಂದು ಶನಿವಾರ ಮಧ್ಯಾಹ್ನ ಪಲ್ಟಿಯಾಗಿ 26ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಅಗಿನವಾಳು ಹಾಗೂ ಸುತ್ತಮುತ್ತಲ ಗ್ರಾಮಗಳ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್‌ ಆಗುತ್ತಿದ್ದಾಗ ಗವಿಬೋರೆ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.  

ನಂಜನಗೂಡು ತಾಲ್ಲೂಕಿನ ಬಾಗೂರು, ಮಡನಳ್ಳಿ, ಹೂರಲ್ವಾಡಿ, ತಗಡೂರು ಕೆಬ್ಬೆಪುರ ಸುತ್ತಮುತ್ತಲ 60ಕ್ಕೂ ಹೆಚ್ಚು ಜನರು ಬಸ್‌ನಲ್ಲಿದ್ದರು. ಬಸ್‌ ಉರುಳಿ ಬಿದ್ದ ರಭಸಕ್ಕೆ ಬಹುತೇಕರಿಗೆ ಎದೆ, ಕೈಕಾಲು ಒತ್ತಿಕೊಂಡಂತೆ ಆಗಿದ್ದು, ಆಘಾತದಿಂದ ಅಸ್ವಸ್ಥಗೊಂಡರು. 

ADVERTISEMENT

‘ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಲು ಶುಕ್ರವಾರ ಬಹಳಷ್ಟು ಜನರು ಬಂದಿದ್ದರು. ಶನಿವಾರ ಪೂಜೆ ಮುಗಿಸಿ ಕೃಷ್ಣನ ಕಟ್ಟೆ ಬಳಿ ಆಹಾರ ಸೇವಿಸಲು ತೆರಳುತ್ತಿದ್ದರು. ಈ ವೇಳೆ ಬಸ್ ಚಾಲಕ ತನ್ನ ಸಹಚರನಿಗೆ ಬಸ್ ಓಡಿಸಲು ನೀಡಿದ್ದ’ ಪ್ರಯಾಣಿಕ ಕುಮಾರ್ ಹೇಳಿದರು.

ಬಸ್ ಗವಿ ಬೋರೆ ಬಳಿ ಬಸ್ ಇಳಿಯುತ್ತಿದ್ದಾಗ ಮುಂಭಾಗದಿಂದ ಕಾರು ಬರುವುದನ್ನು ಕಂಡು ಚಾಲಕ ಗಲಿಬಿಲಿಕೊಂಡಿದ್ದ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆಯಿತು. ದೊಡ್ಡ ಮರಗಳಿಗೆ ಸಿಲುಕಿ ಬಸ್‌ ನಿಂತಿತು. ಇದರಿಂದ ದೊಡ್ಡ ಅನಾಹುತ ತಪ್ಪಿದೆ’ ಎಂದು ಬಸ್‌ನಲ್ಲಿದ್ದ ಅಗಿನವಾಳು ಗ್ರಾಮದ ನಿವಾಸಿ ಮಹದೇವಮ್ಮ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.