ADVERTISEMENT

ಚಾಮರಾಜನಗರ: ‘ಮಾನವೀಯತೆಯ ಶ್ರೇಷ್ಠತೆ ಸಾರಿದ ಕೃತಿ’

‘ತೆರೆಯೋ ಬಾಗಿಲನು’ ಕನ್ನಡದ ಅನುವಾದ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:55 IST
Last Updated 1 ಡಿಸೆಂಬರ್ 2025, 5:55 IST
ಚಾಮರಾಜನಗರದ ರೋಟರಿ ಭವನದಲ್ಲಿ ‘ತೆರೆಯೋ ಬಾಗಿಲನು’ ಪುಸ್ತಕವನ್ನು ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಬಿ.ಆರ್.ಮಂಜುನಾಥ್ ಲೋಕಾರ್ಪಣೆ ಮಾಡಿದರು
ಚಾಮರಾಜನಗರದ ರೋಟರಿ ಭವನದಲ್ಲಿ ‘ತೆರೆಯೋ ಬಾಗಿಲನು’ ಪುಸ್ತಕವನ್ನು ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಬಿ.ಆರ್.ಮಂಜುನಾಥ್ ಲೋಕಾರ್ಪಣೆ ಮಾಡಿದರು    

ಚಾಮರಾಜನಗರ: ‘ತೆರೆಯೋ ಬಾಗಿಲನು’ ಪುಸ್ತಕ ಎಲ್ಲರೂ ನಮ್ಮವರೇ ಎಂಬ ಮಾನವೀಯ ಶ್ರೇಷ್ಠತೆಯ ಸಂದೇಶ ಸಾರಿದೆ ಎಂದು ‘ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ವೇದಿಕೆ’ ಸಂಚಾಲಕ ಬಿ.ಆರ್.ಮಂಜುನಾಥ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಾಂತಲಾ ಕಲಾವಿದರು, ರೋಟರಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಕ್ರಿಶನ್‌ಚಂದ್ ಅವರ ಉರ್ದುಮೂಲವಾದ ‘ದರವಾಝೇ ಖೋಲ್ ದೋ’ ನಾಟಕದ ಕನ್ನಡದ ಅನುವಾದ  ‘ತೆರೆಯೋ ಬಾಗಿಲನು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘1950–60ರ ದಶಕದಲ್ಲಿ ಮನೆ ಬಾಡಿಗೆ ಪಡೆಯುವಾಗ ಮಾಂಸಾಹಾರಿಗಳು ಎದುರಿಸುತ್ತಿದ್ದ ಸಮಸ್ಯೆ, ಯಾತನೆಯನ್ನು ಪುಸ್ತಕದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಸ್ವಂತ ಧರ್ಮ, ಜಾತಿ ಹೆಸರು ಮುಚ್ಚಿಟ್ಟು ಮನೆ ಬಾಡಿಗೆ ಪಡೆಯಬೇಕಾದ ಪ್ರಸಂಗಗಳು, ಸತ್ಯ ಗೊತ್ತಾದಾಗ ಮನೆಯ ಮಾಲೀಕನಿಂದ ಎದುರಿಸಬೇಕಾದ ಮುಜುಗರದ ಸನ್ನಿವೇಶಗಳು ಪುಸ್ತಕದಲ್ಲಿ ಮೂಡಿಬಂದಿವೆ. ಧರ್ಮದ ಕಾರಣಕ್ಕೆ ಮನೆ ಬಾಡಿಗೆ ನೀಡಲು ನಿರಾಕರಿಸುವ ಮನೆಯ ಮಾಲೀಕ ಹೃದಯಾಘಾತಕ್ಕೆ ತುತ್ತಾದಾಗ ಕ್ರಿಶ್ಚಿಯನ್ ವೈದ್ಯರು ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಸನ್ನಿವೇಶ ಜಗತ್ತಿನಲ್ಲಿ ಮಾನವೀಯತೆಯೇ ಶ್ರೇಷ್ಠ ಎಂಬ ತತ್ವವನ್ನು ಸಾರುತ್ತದೆ. ಪುಸ್ತಕದಲ್ಲಿ ಪ್ರತಿ ವಿಚಾರಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ’ ಎಂದರು.

ADVERTISEMENT

ಶಾಂತಲಾ ಕಲಾವಿದರ ತಂಡದ ವಿ. ಚಿತ್ರಾ ಮಾತನಾಡಿ, ‘ಇಂದಿನ ‌ಸಾಮಾಜಿಕ ಅಸಮಾನತೆ, ಜಾತಿ–ಧರ್ಮಗಳ ಗೊಂದಲಗಳ ನಡುವಿನ ಸಮಸ್ಯೆಗಳಿಗೆ ನಾಟಕಗಳು ಪರಿಹಾರ ಕ್ರಮಗಳಾಗಿವೆ’ ಎಂದು ಅಭಿಪ್ರಾಯಪಟ್ಟರು. ಪುಸ್ತಕ ಲೋಕಾರ್ಪಣೆಗೂ ಮುನ್ನ ಶಾಂತಲಾ ಕಲಾವಿದರಾದ ಚಿತ್ರಾ, ಅಬ್ರಾಹಂ ಡಿಸಿಲ್ವ, ಎಂ.ಲಿಂಗಪ್ಪ, ವೆಂಕಟರಾಜು ಹಾಗೂ ಇತರೆ ಕಲಾವಿದರು ನಾಟಕದ ಸಾಲುಗಳನ್ನು ಓದುವ ಮೂಲಕ ಮಾನವತೆಯೇ ಶ್ರೇಷ್ಠ ಎಂದು ಸಾರಿದರು.

 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ರೋಟರಿ ಅಧ್ಯಕ್ಷ ಚಂದ್ರಶೇಖರ್, ಪುಸ್ತಕ ಅನುವಾದಕ ಸಯ್ಯದ್ ಮನ್ಸೂರ್ ಅಹಮದ್, ಕೆ.ವೆಂಕಟರಾಜು, ಸಾಹಿತ್ಯಾ ಆಸಕ್ತರು ಭಾಗವಹಿಸಿದ್ದರು.

ಪುಸ್ತಕದ ಹೆಸರು: ತೆರೆಯೋ ಬಾಗಿಲು ಉರ್ದು ಮೂಲ: ಕ್ರಿಶನ್‌ ಚಂದರ್‌ ಕನ್ನಡಕ್ಕೆ ಅನುವಾದ:  ಪ್ರೊ.ಸೈಯದ್ ಮನ್ಸೂರ್ ಅಹಮದ್‌ ಕೆ.ವೆಂಕಟರಾಜು ಬೆಲೆ: ₹ 80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.