
ಚಾಮರಾಜನಗರ: ದೇಶ ಮತ್ತು ಧರ್ಮಕ್ಕಾಗಿ ದುಡಿದವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಇತಿಹಾಸವನ್ನು ಎಲ್ಲೆಡೆ ಪಸರಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಸಲಹೆ ನೀಡಿದರು.
ಋಗ್ವೇದಿ ಯೂತ್ ಕ್ಲಬ್, ಜೈಹಿಂದ್ ಪ್ರತಿಷ್ಠಾನ, ಅಮಚವಾಡಿ ಶ್ರೀ ಮಹದೇಶ್ವರ ಅರಳಿಕಟ್ಟೆ ಸಮೀಪ ವಿಶ್ವ ತರ್ಕ ದಿನ ಹಾಗೂ ಭಾರತೀಯರ ಕೊಡುಗೆಗಳ ಕುರಿತು ಆಯೋಜಿಸಿದ್ದ ಜೈಹಿಂದ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಸ್ವಾಮಿ ವಿವೇಕಾನಂದರು ವೇದಾಂತ ಭಾರತಿ ಹಾಗೂ ರಾಮಕೃಷ್ಣ ಆಶ್ರಮಗಳನ್ನು ಸ್ಥಾಪಿಸಿ ಸೇವೆ ಮತ್ತು ತ್ಯಾಗದ ಚಿಂತನೆಗಳ ಮಹತ್ವವನ್ನು ತಿಳಿಸಿದರು ಎಂದರು.
ವಿವೇಕಾನಂದರ ರಾಷ್ಟ್ರಭಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಸ್ವೀಕರಿಸಿ, ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದ ಅಪ್ರತಿಮ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ, ಇತಿಹಾಸವನ್ನು ಎಲ್ಲರೂ ತಿಳಿಯಬೇಕು. ನೇತಾಜಿ ಅವರು ಭಾರತ ರಾಷ್ಟ್ರೀಯ ಸೈನ್ಯದ ಮೂಲಕ ನಡೆಸಿದ ಹೋರಾಟ ಚಿರಸ್ಮರಣೀಯ ಎಂದರು.
ಜ.14ರಂದು ವಿಶ್ವದಾದ್ಯಂತ ತರ್ಕ ದಿನ ಆಚರಿಸಲಾಗುತ್ತದೆ. ತರ್ಕ ಶಾಸ್ತ್ರಕ್ಕೆ ಭಾರತೀಯರ ನೀಡಿರುವ ಕೊಡುಗೆ ಅಪಾರವಾಗಿದ್ದು ಸರಿಯಾದ ಆಲೋಚನೆಯ ಸ್ವರೂಪ ತಿಳಿಸುವ ಶಾಸ್ತ್ರವೇ ತರ್ಕ ಶಾಸ್ತ್ರವಾಗಿದೆ. ಮನುಷ್ಯನ ಜೀವನ ಆನಂದ ಸಾಗರದಲ್ಲಿರಲು ಆಲೋಚನೆಗಳು ಬಹಳ ಮುಖ್ಯವಾದದ್ದು. ತರ್ಕ ಮತ್ತು ತತ್ವಶಾಸ್ತ್ರದ ಬಗ್ಗೆ ವಿಶೇಷ ಚಿಂತನೆ ಹಾಗೂ ಜಾಗೃತಿ ಅಗತ್ಯ. ಭಾರತೀಯ ತರ್ಕ ಮತ್ತು ತತ್ವಶಾಸ್ತ್ರದ ಬಗ್ಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ, ಜೈ ಹಿಂದ್ ಪ್ರತಿಷ್ಠಾನ ವಿವೇಕ, ನೇತಾಜಿ, ಜೈ ಹಿಂದ್ ಅಭಿಯಾನದ ಮೂಲಕ ತಾಲ್ಲೂಕಿನಾದ್ಯಂತ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಾಷ್ಟ್ರೀಯ ಚಿಂತನೆಗಳನ್ನು ಯುವಜನತೆಗೆ ತಿಳಿಸುವುದರ ಜೊತೆಗೆ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಮಹನೀಯರ ಚಿಂತನೆಗಳನ್ನು ತಿಳಿಸುವ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯ ಎಂದರು.
ಗ್ರಾಮದ ಮುಖಂಡ ಮಹದೇವ ಶೆಟ್ಟಿ ಮಾತನಾಡಿದರು. ಋಗ್ವೇದಿ ಯೂತ್ ಕ್ಲಬ್ ನ ಗಣೇಶ, ರಕ್ಷಿತ್, ಸೂರ್ಯ, ಮನೋಜ್, ವಸಂತ್ ,ಹರೀಶ್ ಪುಟ್ಟಣ್ಣ, ಮಾದೇವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.