ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಶೇ 99.92ರಷ್ಟು ಪ್ರಗತಿ, ಚಾಮರಾಜನಗರ ಪ್ರಥಮ

ಶೇ 99.92ರಷ್ಟು ಪ್ರಗತಿ; ನೆಟ್‌ವರ್ಕ್ ಸಮಸ್ಯೆ, ಸವಾಲುಗಳ ಮಧ್ಯೆಯೂ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:25 IST
Last Updated 9 ಅಕ್ಟೋಬರ್ 2025, 6:25 IST
ಚಾಮರಾಜನಗರ ಜಿಲ್ಲೆಯ ಸರಗೂರು ಗ್ರಾಮದಲ್ಲಿ ಸಮೀಕ್ಷಾ ಕಾರ್ಯದಲ್ಲಿ ನಿರತರಾಗಿರುವ ಸಮೀಕ್ಷಾದಾರರು ಹಾಗೂ ಅಧಿಕಾರಿಗಳ ತಂಡ
ಚಾಮರಾಜನಗರ ಜಿಲ್ಲೆಯ ಸರಗೂರು ಗ್ರಾಮದಲ್ಲಿ ಸಮೀಕ್ಷಾ ಕಾರ್ಯದಲ್ಲಿ ನಿರತರಾಗಿರುವ ಸಮೀಕ್ಷಾದಾರರು ಹಾಗೂ ಅಧಿಕಾರಿಗಳ ತಂಡ   

ಚಾಮರಾಜನಗರ: ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆ ಶೇ 99.92ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.

ಸೆ.22ರಿಂದ ಆರಂಭವಾದ ಸಮೀಕ್ಷೆಯಲ್ಲಿ ಜಿಲ್ಲೆಯ 2,456 ಬ್ಲಾಕ್‌ಗಳಲ್ಲಿರುವ 2,56,499 ಕುಟುಂಬಗಳ ಸಮೀಕ್ಷೆ ಗುರಿ ನಿಗದಿಯಾಗಿತ್ತು. ಇದುವರೆಗೂ ಸಮೀಕ್ಷಾದಾರರು 2,56,169 ಕುಟುಂಬಗಳ ಸಮೀಕ್ಷೆ ನಡೆಸಿದ್ದು 330 ಕುಟುಂಬಗಳು ಮಾತ್ರ ಬಾಕಿ ಉಳಿದಿವೆ. ಇನ್ನೊಂದು ದಿನದಲ್ಲಿ ಸಮೀಕ್ಷೆ ಶೇ 100 ಗುರಿ ಸಾಧಿಸುವ ವಿಶ್ವಾಸವಿದೆ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು.

ಹಾವೇರಿ ಶೇ 98.85, ಕೊಪ್ಪಳ ಶೇ 98.57, ರಾಯಚೂರು ಶೇ 95.44, ಗದಗ ಶೇ 94.04, ಉತ್ತರ ಕನ್ನಡ ಶೇ 91.75, ಬೀದರ್ ಶೇ 91.44, ಯಾದಗಿರಿ ಶೇ 90.85, ಬಾಗಲಕೋಟೆ ಶೇ 89.87, ಕಲಬುರಗಿ ಶೇ 89.21 ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ADVERTISEMENT

ಯಳಂದೂರು ಪ್ರಥಮ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಳಂದೂರು ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. 163 ಬ್ಲಾಕ್‌ಗಳಲ್ಲಿರುವ 18,349 ಕುಟುಂಬಗಳ ಸಮೀಕ್ಷಾ ಗುರಿಯ ಪೈಕಿ 19,171 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಶೇ 104.48ರಷ್ಟು ಸಾಧನೆಯಾಗಿದೆ. 

ಹನೂರು ತಾಲ್ಲೂಕು ಎರಡನೇ ಸ್ಥಾನದಲ್ಲಿದ್ದು 382 ಬ್ಲಾಕ್‌ಗಳಲ್ಲಿರುವ 42,884 ಕುಟುಂಬಗಳ ಗುರಿಯ ಪೈಕಿ 44,363 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು ಶೇ 103.45ರಷ್ಟು ಸಾಧನೆಯಾಗಿದೆ.  

ಮೂರನೇ ಸ್ಥಾನದಲ್ಲಿರುವ ಚಾಮರಾಜನಗರ ತಾಲ್ಲೂಕಿನಲ್ಲಿ 939 ಬ್ಲಾಕ್‌ಗಳಲ್ಲಿರುವ 90,526 ಕುಟುಂಬಗಳ ಸಮೀಕ್ಷಾ ಗುರಿಯ ಪೈಕಿ 90998 ಕುಟುಂಬಗಳ ಸಮೀಕ್ಷೆ ಮುಗಿದಿದ್ದು ಶೇ 100.52ರಷ್ಟು ಗುರಿಮುಟ್ಟಲಾಗಿದೆ.

ನಂತರದಲ್ಲಿ ಸ್ಥಾನದಲ್ಲಿರುವ ಗುಂಡ್ಲುಪೇಟೆಯಲ್ಲಿ 612 ಬ್ಲಾಕ್‌ಗಳ 58,696 ಕುಟುಂಬಗಳ ಪೈಕಿ 57,694 ಕುಟುಂಬಗಳ ಸಮೀಕ್ಷೆ ಮುಗಿದಿದ್ದು ಶೇ 98.29 ಹಾಗೂ ಕೊಳ್ಳೇಗಾಲ ತಾಲ್ಲೂಕಿನ 415 ಬ್ಲಾಕ್‌ಗಳಲ್ಲಿರುವ 46,044 ಕುಟುಂಬಗಳ ಪೈಕಿ 44061 ಕುಟುಂಬಗಳ ಸಮೀಕ್ಷೆ ಮಕ್ತಾಯವಾಗಿದ್ದು ಶೇ 95.69 ಗುರಿ ತಲುಪಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ 2,456 ಸಮೀಕ್ಷಾದಾರರನ್ನು ನಿಯೋಜಿಸಲಾಗಿದ್ದು ಚಾಮರಾಜನಗರ ತಾಲ್ಲೂಕಿನಲ್ಲಿ 939, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 557, ಹನೂರು ತಾಲ್ಲೂಕಿನಲ್ಲಿ 382, ಕೊಳ್ಳೇಗಾಲ ತಾಲ್ಲೂಕಿನಲ್ಲಿ 415 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 163 ಸಮೀಕ್ಷಾದಾರರಿಗೆ ‌ಸಮೀಕ್ಷೆಯ ಜವಾಬ್ದಾರಿ ವಹಿಸಲಾಗಿದೆ. ಸಮೀಕ್ಷಾದಾರರ ಮೇಲ್ವಿಚಾರಣೆಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಪ್ರತಿದಿನ ವಿಡಿಯೊ ಸಂವಾದ ನಡೆಸಿ ಸಮೀಕ್ಷಾದಾರರಿಗೆ ಗುರಿ ನಿಗದಿಪಡಿಸಿ ದಿನದ ಅಂತ್ಯಕ್ಕೆ ಪ್ರಗತಿ ಪರಿಶೀಲನೆ ನಡೆಯುತ್ತಿದೆ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಮೀಕ್ಷಾದರರ ಪರಿಶ್ರಮದಿಂದ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸಹಾಯವಾಣಿ

ಜಿಲ್ಲೆಯ ಹೆಚ್ಚಿನ ಭಾಗವು ಅರಣ್ಯ ಪ್ರದೇಶದಿಂದ ಕೂಡಿದ್ದು ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶಗಳನ್ನು ಗುರುತಿಸಿ ಕ್ಯಾಂಪ್ ಮೋಡ್‌ಗಳಾಗಿ ಪರಿಗಣಿಸಲಾಗಿದೆ. ನೆಟ್‌ವರ್ಕ್ ದೊರೆಯುವ ಪ್ರದೇಶಗಳಲ್ಲಿ ಕ್ಯಾಂಪ್‌ಗಳನ್ನು ಸ್ಥಾಪಿಸಿ ಸರ್ಕಾರಿ ವಾಹನಗಳಲ್ಲಿ ಗ್ರಾಮಸ್ಥರನ್ನು ಶಿಬಿರಗಳಿಗೆ ಕರೆತಂದು ಸಮೀಕ್ಷೆ ಮಾಡಲಾಗುತ್ತಿದೆ.

ಯಾರೂ ಸಮೀಕ್ಷೆಯಿಂದ ಬಿಟ್ಟುಹೋಗದಂತೆ ಕ್ರಮಕೈಗೊಳ್ಳಲಾಗಿದೆ. ಸಮೀಕ್ಷೆಯಿಂದ ಕುಟುಂಬಗಳು ಕೈಬಿಟ್ಟುಹೋಗಿದ್ದರೆ ಸಾರ್ವಜನಿಕರು ಸಹಾಯವಾಣಿ  08226-223160/161/163 ಹಾಗೂ 9740942901 ಸಂಪರ್ಕಿಸಿದರೆ ಗಣತಿದಾರರನ್ನು ನಿಯೋಜಿಸಲಾಗುವುದು ಗೊಂದಲ ಮತ್ತು ದೂರುಗಳಿದ್ದರೆ ಸಹಾಯವಾಣಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.