ಚಾಮರಾಜನಗರ: ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 12 ಕಡೆಗಳಲ್ಲಿ ನಡೆದ ಕಳವು ಪ್ರಕರಣಗಳನ್ನು ಭೇದಿಸಲಾಗಿದ್ದು 14 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 285 ಗ್ರಾಂ ಚಿನ್ನಾಭರಣ, 45 ಗ್ರಾಂ ಬೆಳ್ಳಿ, ಎರಡು ಓಮ್ನಿ ಕಾರು, 10 ಬೈಕ್ ಹಾಗೂ ₹55,000 ವಶಪಡಿಸಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶನಿವಾರ ಪ್ರಕರಣಗಳ ವಿವರ ನೀಡಿದ ಎಸ್‌ಪಿ, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ 3, ಗ್ರಾಮಾಂತರ ಠಾಣೆಯಲ್ಲಿ 2, ಪೂರ್ವ ಠಾಣೆ ಹಾಗೂ ಕುದೇರು ಠಾಣೆಯಲ್ಲಿ ತಲಾ ಒಂದು, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಹಾಗೂ ಯಳಂದೂರು ಠಾಣೆಯಲ್ಲಿ ತಲಾ ಎರಡು ಹಾಗೂ ರಾಮಾಪುರ ಠಾಣೆಯಲ್ಲಿ 1 ಕಳವು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರ ನೀಡಿದರು.
ಪ್ರಕರಣದ ವಿವರ: ಕೊಳ್ಳೆಗಾಲ ಗ್ರಾಮಾಂತರ ಠಾಣೆಯ ಶಿವನಸಮುದ್ರದಲ್ಲಿ ಸೆ.25ರಂದು ಶಿವರಾಮೇಗೌಡ ಎಂಬುವರ ಮನೆಯ ಬೀಗ ಮುರಿದು ₹15,000 ನಗದು, 8 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಬೆಂಗಳೂರಿನ ಡಿ.ಜಿ ಹಳ್ಳಿಯ ಮುಜಾಹಿದ್ ಖಾನ್‌ನನ್ನು ಬಂಧಿಸಿ ₹5000 ವಶಪಡಿಸಿಕೊಳ್ಳಲಾಗಿದೆ. ಇದೇ ಠಾಣೆ ವ್ಯಾಪ್ತಿಯ ಕಾಮಗಾರಿಯಲ್ಲಿ ರವಿ ಎಂಬುವರ ಮನೆಯಲ್ಲಿ ₹1 ಲಕ್ಷ ನಗದು ಕಳವು ಮಾಡಿದ್ದ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಕಾಶ್ ಹಾಗೂ ಸಂತೋಷ್‌ನನ್ನು ಬಂಧಿಸಿ ₹50,000 ವಶಕ್ಕೆ ಪಡೆಯಲಾಗಿದೆ.
ಯಳಂದೂರು ಠಾಣೆಯ ಹೊನ್ನೂರು ಬೀಚಹಳ್ಳಿಯಲ್ಲಿ ಚಂದ್ರಮ್ಮ ಅವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಹೊನ್ನೂರು ಬೀಚಹಳ್ಳಿಯ ಪ್ರವೀಣ್ ಕುಮಾರ್‌ನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಯಳಂದೂರು ಠಾಣೆಯ ಮದ್ದೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಬೈಕ್ ಕಳವು ಮಾಡಿದ್ದ ಆರೋಪದ ಮೇಲೆ ಅಮಚವಾಡಿ ಗ್ರಾಮದ ಸಿದ್ದರಾಜು ಎಂಬುವನನ್ನು ಬಂಧಿಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಎರಡು ಓಮ್ನಿ ವಾಹನ, 7 ಸ್ಕೂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಮಾಪುರದಲ್ಲಿ ಮಹಿಳೆಯನ್ನು ಕಟ್ಟಿಹಾಕಿ 45 ಗ್ರಾಂ ಚಿನ್ನದ ಸರ ಕಳವು ಮಾಡಿದ್ದ ಪ್ರಕರಣದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಸತ್ತೆಗಾಲ ಗ್ರಾಮದ ನಟೇಶ್ ಎಂಬುವನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕುದೇರು ಠಾಣಾ ವ್ಯಾಪ್ತಿಯಲ್ಲಿ ಉಮತ್ತೂರು ಗ್ರಾಮದಲ್ಲಿ ಬೈಕ್ ಕಲವು ಮಾಡಿದ್ದ ಬೆಂಗಳೂರಿನ ವಿಜಯನಗರದ ಚಂದಪ್ಪನನ್ನು ಬಂಧಿಸಿ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ಪೂರ್ವ ಠಾಣೆ ಸೇರಿದಂತೆ ಹಲವು ಕಡೆಗಳಲ್ಲಿ ಸ್ಕೂಟರ್ ಕಳವು ಮಾಡಿದ್ದ ಬಂಗಾರಸ್ವಾಮಿ, ಮುಬಾರಕ್ ಎಂಬುವರನ್ನು ಬಂಧಿಸಿ 6 ದ್ವಿಚಕ್ರ ವಾಹನಗಳು ಹಾಗೂ ವಾಹನಗಳ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಇಬ್ಬರು ಬಾಲಕರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ಮಾಹಿತಿ ನೀಡಿದರು.
ಚಾಮರಾಜನಗರ ಗ್ರಾಮಾಂತರ ಠಾಣೆಯ ಕೆಂಗಾಕಿ ಗ್ರಾಮದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆ.ವಿ.ಬಸವರಾಜು ಎಂಬಾತನನ್ನು ಬಂಧಿಸಿ ಚಿನ್ನದ ಬಳೆ ಹಾಗೂ ಮಾಂಗಲ್ಯಸರ ವಶಕ್ಕೆ ಪಡೆಯಲಾಗಿದೆ. ಇದೇ ಠಾಣಾ ವ್ಯಾಪ್ತಿಯ ಕಾಡಹಳ್ಳಿಯಲ್ಲಿ 215 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಯುವತಿಯನ್ನು ವಶಕ್ಕೆ ಪಡೆಯಲಾಗಿದ್ದು ಮಾಲನ್ನು ಜಪ್ತಿ ಮಾಡಲಾಗಿದೆ ಎಂದರು.
ಚಾಮರಾಜನಗರ ಪಟ್ಟಣ ಠಾಣೆಯ ದೇವಾಂಗ ಬೀದಿಯಲ್ಲಿ ಹಾಶಗೂ ಡಿವಿಯೇಷನ್ ರಸ್ತೆಯಲ್ಲಿ ಕಳುವಾಗಿದ್ದ ಎರಡು ಬೈಕ್‌ಗಳು ಸಿಕ್ಕಿದ್ದು ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಎಸ್‌ಪಿ ವಿವರ ನೀಡಿದರು.
ಈ ವೇಳೆ ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ, ಚಾಮರಾಜನಗರ ಡಿವೈಎಸ್‌ಪಿ ಎನ್.ಸ್ನೇಹಾರಾಜ್, ಇನ್‌ಸ್ಪೆಕ್ಟರ್‌ಗಳಾದ ಸಾಗರ್, ನವೀನ್, ಶ್ರೀಕಾಂತ್, ಶೇಷಾದ್ರಿ, ಸಿಡಿಆರ್ ವಿಭಾಗದ ಎಎಸ್‌ಐ ವೆಂಕಟೇಶ್ ಸೇರಿದಂತೆ ಹಲವರು ಇದ್ದರು.
‘ತಲೆಮರೆಸಿಕೊಂಡವರಿಗಾಗಿ ಶೋಧ’
ಕಳವು ಪ್ರಕರಣಗಳಲ್ಲಿ ಬೆಂಗಳೂರಿನ ಕೆಲವು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬೈಕ್‌ಗಳನ್ನು ಕದ್ದು ಬಿಡಿಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡುವ ಜಾಲ ಬೇಧಿಸಿದ್ದು ತಲೆಮರೆಸಿಕೊಂಡವರ ಪತ್ತೆಗೆ ಶೋಧ ನಡೆಯುತ್ತಿದೆ. ಒಂದು ತಿಂಗಳಲ್ಲಿ 12 ಕಳವು ಪ್ರಕರಣಗಳನ್ನು ಬೇಧಿಸಿರುವುದು ಇಲಾಖೆ ಸಿಬ್ಬಂದಿಯ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.