
ಚಾಮರಾಜನಗರ: ಜಿಲ್ಲೆಯ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಓದುತ್ತಿರುವ ಆದಿವಾಸಿ ಸಮುದಾಯಗಳಿಗೆ ಸೇರಿದ ಬಹಳಷ್ಟು ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆದಿವಾಸಿ ಹಿತರಕ್ಷಣಾ ಸಮಿತಿ ದೂರಿದೆ.
ಮೂಲ ದಾಖಲಾತಿಗಳ ಅಲಭ್ಯತೆ, ಅನಕ್ಷರತೆ, ಬಡತನ ಹಾಗೂ ಇತರ ಸಮಸ್ಯೆಗಳಿಂದ ಆದಿವಾಸಿಗಳು ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದು, ಆದಿವಾಸಿಗಳ ಶ್ರೇಯೋಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ಕೂಡ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಆದಿವಾಸಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಗಾಣಿಗ ಮಂಗಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹುತೇಕ ಆದಿವಾಸಿ ಮಕ್ಕಳ ಬಳಿ ಜನನ ಪ್ರಮಾಣ ಪತ್ರ ಇಲ್ಲ. ಜನನ ಪ್ರಮಾಣ ಪತ್ರ ಪಡೆಯಲು ಪೂರಕ ದಾಖಲೆಗಳೂ ಇಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ಕಚೇರಿಗಳಿಗೆ ಅಲೆಯುವ ಸಾಮರ್ಥ್ಯ ಇಲ್ಲದ ಬುಡಕಟ್ಟು ನಿವಾಸಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ.
ಆರು ತಿಂಗಳ ಹಿಂದಷ್ಟೆ ಆಶ್ರಮ ಶಾಲೆಯಲ್ಲಿ ಓದುತ್ತಿರುವ ಆಧಾರ್ ಕಾರ್ಡ್ ವಂಚಿತ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ನೀಡುವುದಾಗಿ ಅಧಿಕಾರಿಗಳು ಅಭಿಯಾನ ಆರಂಭಿಸಿದ್ದರು. ಆದರೆ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.
ಆಧಾರ್ ಕಾರ್ಡ್ ಇಲ್ಲದೆ ಆದಿವಾಸಿಗಳು ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿ ವೇತನ, ಬ್ಯಾಂಕ್ ಖಾತೆ ಸಹಿತ ಇತರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಡ್ಡಿಯಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೂಡಲೇ ಆಧಾರ್ ಕಾರ್ಡ್ ವಂಚಿತ ಮಕ್ಕಳ ಮಾಹಿತಿ ಪಡೆದು ಅಭಿಯಾನದ ಮಾದರಿಯಲ್ಲಿ ಆಧಾರ್ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ನ.17ರಂದು ಚಾಮರಾಜನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಎದುರು ಆದಿವಾಸಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಮಿತಿ ಅದ್ಯಕ್ಷ ನಾಗೇಂದ್ರ ಗಾಣಿಗ ಮಂಗಲ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.