ADVERTISEMENT

ಚಾಮರಾಜನಗರ: ಡಿವೈಡರ್‌ಗೆ ಲಾರಿ ಡಿಕ್ಕಿ; ವಾಹನದಲ್ಲಿದ್ದವರು ಪವಾಡ ಸದೃಶ್ಯ ಪಾರು

ಅವೈಜ್ಞಾನಿಕ ಡಿವೈಡರ್ ತೆರವಿಗೆ ಸ್ಥಳೀಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:22 IST
Last Updated 5 ಜನವರಿ 2026, 7:22 IST
ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ಟ್ರಕ್‌ ಡಿವೈಡರ್‌ಗೆ ಡಿಕ್ಕಿಯಾಗಿರುವುದು
ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ಟ್ರಕ್‌ ಡಿವೈಡರ್‌ಗೆ ಡಿಕ್ಕಿಯಾಗಿರುವುದು   

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನ ಛತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ಟ್ರಕ್‌ ಡಿವೈಡರ್‌ಗೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಿನ ಜಾವ ಮಂಜು ಆವರಿಸಿದ್ದ ರಸ್ತೆಯಲ್ಲಿ ಲಾರಿ ಸಾಗುತ್ತಿದ್ದಾಗ ರಸ್ತೆಯ ಮಧ್ಯೆ ಹಾಕಲಾಗಿದ್ದ ಡಿವೈಡರ್ ಕಾಣದೆ ಚಾಲಕ ನೇರವಾಗಿ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಎಂಜಿನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದವು.

ಸ್ಥಳೀಯರ ಆಕ್ರೋಶ:‌

ADVERTISEMENT

‘ಹೆದ್ದಾರಿ ಮಧ್ಯೆ ಅವೈಜ್ಞಾನಿಕವಾಗಿ ಹಾಕಲಾಗಿರುವ ಡಿವೈಡರ್‌ ಕಾಣದೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು ಜೀವಗಳು ಬಲಿಯಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಡಿವೈಡರ್ ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ಹಾಕಿರುವ ಬಗ್ಗೆ ಸ್ಥಳೀಯರು ದೂರಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರ ಎನ್‌ಎಚ್‌ಎಐ ಹಾಗೂ ಪೊಲೀಸ್ ಇಲಾಖೆ ಜಂಟಿ ಸರ್ವೆ ನಡೆಸಿ ಡಿವೈಡರ್‌ ತೆರವಿಗೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.