ADVERTISEMENT

ಚಾಮರಾಜನಗರ | ರೋಮಾಂಚನ ಸೃಷ್ಟಿಸಿದ ಕಯಾಕಿಂಗ್, ಜೆಟ್‌ ಸ್ಕೀ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 1:56 IST
Last Updated 6 ಫೆಬ್ರುವರಿ 2026, 1:56 IST
ಚಾಮರಾಜನಗರ ತಾಲ್ಲೂಕಿನ ಪ್ರಸಿದ್ಧ ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೋತ್ಸವಕ್ಕೆ ಗುರುವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು
ಚಾಮರಾಜನಗರ ತಾಲ್ಲೂಕಿನ ಪ್ರಸಿದ್ಧ ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೋತ್ಸವಕ್ಕೆ ಗುರುವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು   

ಚಾಮರಾಜನಗರ: ಜನ ಸಾಹಸ ಕ್ರೀಡೆಗಳತ್ತ ಯುವ ಜನತೆ ಹಾಗೂ ಸಾರ್ವಜನಿಕರನ್ನು ಸೆಳೆಯುವ ಭಾಗವಾಗಿ ತಾಲ್ಲೂಕಿನ ಪ್ರಸಿದ್ಧ ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೋತ್ಸವ ಆಯೋಜಿಸಲಾಗಿದ್ದು, ವಿಭಿನ್ನ ಅನುಭವ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ತಾಲ್ಲೂಕಿನ ಅಟ್ಟುಗೂಳಿಪುರ ಗ್ರಾಮದಲ್ಲಿರುವ ಸುವರ್ಣಾವತಿ ಜಲಾಶಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಲ ಸಾಹಸ ಕ್ರೀಡೋತ್ಸವಕ್ಕೆ ಗುರುವಾರ ಚಾಲನೆ ನೀಡಿದ ಮಾತನಾಡಿದರು.

ಜಾನಪದ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯು ಪ್ರಾಕೃತಿಕವಾಗಿ ನೈಸರ್ಗಿಕವಾಗಿ ಶ್ರೀಮಂತವಾಗಿದ್ದು, ಪ್ರವಾಸಿ ತಾಣವಾಗಿಯೂ ಹೆಸರುವಾಸಿಯಾಗುತ್ತಿದೆ. ಸರ್ಕಾರದಿಂದ ವಿಶೇಷ ಅನುದಾನ ಪಡೆದು ಸುವರ್ಣಾವತಿ ಜಲಾಶಯವನ್ನು ಅಭಿವೃದ್ಧಿಪಡಿಸಲು 2008ರಿಂದಲೂ ಬೇಡಿಕೆ ಇರಿಸುತ್ತಿದ್ದು, ₹43 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪ್ರಸ್ತಾವವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

ADVERTISEMENT

ಜಲ ಸಾಹಸ ಕ್ರೀಡೆಗಳ ಆಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದೆ. ಸುವರ್ಣಾವತಿ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ಕೆರೆಗಳು ತುಂಬಿದರೆ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಕ್ರೀಡೋತ್ಸವದಲ್ಲಿ ಸಾರ್ವಜನಿಕರು, ಯುವಜನರು ಹೆಚ್ಚಾಗಿ ಪಾಲ್ಗೊಂಡು ಪ್ರೋತ್ಸಾಹಿಸುವ ಮೂಲಕ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆ ನಿರಂತರವಾಗಿ ನಡೆಯುವಂತೆ ಸಹಕಾರ ನೀಡಬೇಕು ಎಂದರು.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ಮಾಣಕ್ಕಾಗಿ ₹ 15 ಕೋಟಿ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಇದರಿಂದ ಈಜು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಜಲಸಾಹಸ ಕ್ರೀಡೆಗಳತ್ತ ಯುವಜನತೆಯನ್ನು ಸೆಳೆಯಲು ಇಂತಹ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು. ರಾಜ್ಯಮಟ್ಟದಲ್ಲಿ ಜಲಸಾಹಸ ಕ್ರೀಡೆ ಆಯೋಜನೆಯಾಗಬೇಕು. ಜಿಲ್ಲೆಯ ಯುವಕರು ಹಾಗೂ ಸಾರ್ವಜನಿಕರು ಜಲಸಾಹಸ ಕ್ರೀಡೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯ ಪ್ರಶಿಕ್ಷಕ ಶಬ್ಬೀರ್, ದಿನೇಶ್ ಎಸ್.ಸುವರ್ಣ, ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಧರ್ಮರಾಜ್‌ ಕಾರ್ಯಕ್ರಮದಲ್ಲಿ ಇದ್ದರು. 

ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಜೆಟ್‌ಸ್ಕೀ ಚಲಾಯಿಸಿ ಸಂಭ್ರಮಿಸಿದರು
ಜನ ಸಾಹಸ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳು

2 ದಿನ ನಡೆಯುವ ಜನ ಸಾಹಸ ಕ್ರೀಡೋತ್ಸವ ಯುವಜನತೆ, ಸಾರ್ವಜನಿಕರು ಭಾಗವಹಿಸಲು ಅವಕಾಶ ಪ್ರವಾಸೋದ್ಯಮ, ಜನ ಸಾಹಸ ಕ್ರೀಡೆ ಉತ್ತೇಜನಕ್ಕೆ ಕ್ರಮ

ಎರಡು ದಿನಗಳ ಕ್ರೀಡೋತ್ಸವ: 2 ದಿನಗಳ ಕಾಲ ಆಯೋಜಿಸಿರುವ ಜಲಸಾಹಸ ಕ್ರೀಡೋತ್ಸವದಲ್ಲಿ ಮೊದಲ ದಿನ ಯುವಕರು ವಿವಿಧ ಕಾಲೇಜು ವಿದ್ಯಾರ್ಥಿಗಳು ಮತ್ತು ಎರಡನೇ ದಿನ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ. ಜಲಸಾಹಸ ಕ್ರೀಡೆಗಳ ಆಯೋಜನೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಕ್ರೀಡಾಪಟುಗಳಿಗೂ ಉತ್ತಮ ವೇದಿಕೆ ದೊರೆತಂತಾಗಲಿದೆ. ಜನಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ತರಬೇತಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.