ADVERTISEMENT

ಚಾಮರಾಜನಗರ | ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಕಾಲೇಜು ಆರಂಭ: ಪುಟ್ಟರಂಗಶೆಟ್ಟಿ

ಶಾಲಾಭಿವೃದ್ದಿ ಸಮಿತಿ ಸಭೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:05 IST
Last Updated 4 ಅಕ್ಟೋಬರ್ 2025, 7:05 IST
ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಚೇರಿಯಲ್ಲಿ ನಡೆದ ಶಾಲಾಭಿವೃದ್ದಿ ಸಮಿತಿಯ ಸಭೆಯಲ್ಲಿ ಶಾಸಕ  ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು
ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಚೇರಿಯಲ್ಲಿ ನಡೆದ ಶಾಲಾಭಿವೃದ್ದಿ ಸಮಿತಿಯ ಸಭೆಯಲ್ಲಿ ಶಾಸಕ  ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು   

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಮಹಿಳಾ ಪ್ರಥಮ ಕಾಲೇಜು ನಿರ್ಮಾಣ ಮಾಡುವುದರ ಜೊತೆಗೆ ಕೆಎಎಸ್, ಐಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರ ಆರಂಭಿಸಲಾಗುವುದು ಎಂದು ಶಾಸಕ ಹಾಗೂ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಚೇರಿಯಲ್ಲಿ ನಡೆದ ಶಾಲಾಭಿವೃದ್ದಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಸರ್ಕಾರ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದೆ. ಸ್ವಂತ ಕಟ್ಟಡ ಇಲ್ಲದೆ ಪರ್ಯಾಯವಾಗಿ ಸರ್ಕಾರಿ ಕಟ್ಟಡವನ್ನು ಕಾಲೇಜಿಗೆ ಬಳಕೆ ಮಾಡಿಕೊಳ್ಳಲಾಗಿದೆ.

600 ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿರುವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು, ಈ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದರು.

ADVERTISEMENT

ಮುಂದೆ ಹೆಚ್ಚು ಬೇಡಿಕೆ ಇರುವ, ಉದ್ಯೋಗ ಪಡೆಯಲು ಪೂರಕವಾದ ಹೆಚ್ಚು ಕೋರ್ಸ್‌ಗಳನ್ನು ಆರಂಭಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪ್ರಾಂಶುಪಾಲ ಮಹದೇವಸ್ವಾಮಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ನಿರ್ವಹಣೆ, ಸಿಸಿಟಿವಿ ಕ್ಯಾಮೆರಾಗಳ ಆಳವಡಿಕೆ, ಶೌಚಾಲಯ ನಿರ್ವಹಣೆ, ಪಿಠೋಪಕರಣಗಳು, ಗಣಕಯಂತ್ರ ವಿಭಾಗಕ್ಕೆ ಅಗತ್ಯ ಪರಿಕರಗಳು, ಲ್ಯಾಪ್‌ಟಾಪ್ ಸೇರಿದಂತೆ ಪುಸ್ತಕಗಗಳನ್ನು ಖರೀದಿಗೆ ಸಭೆಯಲ್ಲಿ ಅನುಮೋದನೆ ದೊರೆಯಿತು.

ಸಭೆಯಲ್ಲಿ ಸದಸ್ಯರಾದ ಬಿ.ಕೆ.ರವಿಕುಮಾರ್, ಹೆಬ್ಬಸೂರು ರಂಗಸ್ವಾಮಿ, ಗೋವಿಂದಶೆಟ್ಟಿ, ಕರಿನಂಜನಪುರ ಸ್ವಾಮಿ, ಕಾಗಲವಾಡಿ ಚಂದ್ರು, ಶಾಂತಲಾ, ಎಂ.ಮಹದೇವಸ್ವಾಮಿ, ಶಮಿವುಲ್ಲಾ, ಪಿಡಬ್ಲ್ಯುಡಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಪ್ರೊ.ಮಲ್ಲಿಕಾರ್ಜುನಸ್ವಾಮಿ, ಪ್ರೊ.ಜಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.