ADVERTISEMENT

ಖಾತ್ರಿ ಯೋಜನೆ: ಬೇಡಿಕೆಯಷ್ಟು ಉದ್ಯೋಗ ನೀಡಿ; ಸಿಇಒ ಮೋನಾ ರೋತ್ ಸೂಚನೆ

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿಸಿ ಸಿಇಒ ಮೋನಾ ರೋತ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 7:10 IST
Last Updated 22 ಸೆಪ್ಟೆಂಬರ್ 2025, 7:10 IST
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಉದ್ಯೋಗ ನೀಡಲು ಎಲ್ಲ ಗ್ರಾಮ ಪಂಚಾಯತಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸೂಚನೆ ನೀಡಿದರು. 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಕುಡಿಯುವ ನೀರಿನ ಸಮಸ್ಯೆ, ನರೇಗಾ, ಸ್ವಚ್ಛ ಭಾರತ್ ಮಿಷನ್, ಎನ್.ಆರ್.ಎಲ್.ಎಂ, ವಸತಿ, ತೆರಿಗೆ ವಸೂಲಾತಿ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಉದ್ಯೋಗಕ್ಕೆ ಫಲಾನುಭವಿಗಳು ಬೇಡಿಕೆ ಇರಿಸಿದರೆ ಗ್ರಾಮ ಪಂಚಾಯಿತಿಗಳು ನರೇಗಾ ಮಾರ್ಗಸೂಚಿಯಂತೆ ತುರ್ತು ಉದ್ಯೋಗ ನೀಡಬೇಕು.

ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಡಿಯ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ತೋಟಗಾರಿಕೆ ಇಲಾಖೆಯಡಿ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯು ಮುಖ್ಯಸ್ಥರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ADVERTISEMENT

ಸಾಮಾಜಿಕ ಅರಣ್ಯ ಇಲಾಖೆಯು ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ಬದಿ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಸಸಿ ನೆಡುವ ಕಾಮಗಾರಿ ಕೈಗೊಳ್ಳಲು ಸೂಕ್ತ ಸಮಯವಾಗಿದ್ದು ತುರ್ತು ಕ್ರಮವಹಿಸಬೇಕು. ಕೃಷಿ ಇಲಾಖೆ ಹಾಗೂ ರೇಷ್ಮೆ ಇಲಾಖೆ ಸಹ ನರೇಗಾ ಅಡಿ ವೈಯಕ್ತಿಕ ಸೌಲಭ್ಯ ಒದಗಿಸಬೇಕು. ಹಿಪ್ಪುನೇರಳೆ ಬೆಳೆಯುವ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. 

ಗ್ರಾಮೀಣ ಪ್ರದೇಶಗಳಲ್ಲಿ ಬೂದು ನೀರು ನಿರ್ವಹಣೆಯಡಿ 11 ಗ್ರಾಮ ಪಂಚಾಯತಿಗಳಲ್ಲಿ 1,189 ಕಾಮಗಾರಿ ಅನುಷ್ಠಾನಗೊಳಿಸುತ್ತಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದೊಂದಿಗೆ ಸಮನ್ವಯ ಸಾಧಿಸಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ತುರ್ತು ಕಾಮಗಾರಿ ಪ್ರಾರಂಭಿಸಬೇಕು. ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಿಇಒ ನಿರ್ದೇಶನ ನೀಡಿದರು.

ದುರ್ಬಲ ವರ್ಗಗಳ ಕುಟುಂಬಗಳ ಸುಸ್ಥಿರ ಅಭಿವೃದ್ದಿಗೆ ನೆರವಾಗಲು ಜಾನುವಾರು ಕೊಟ್ಟಿಗೆ, ತೋಟಗಾರಿಕೆ ಹಾಗೂ ರೇಷ್ಮೆ ಪ್ರದೇಶ ವಿಸ್ತರಣೆ, ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ನಿರ್ಮಾಣ, ಮಹಿಳೆಯರ ಬಲವರ್ಧನೆಗೆ ಪೂರಕವಾಗಿ ಸಂಜೀವಿನಿ ಶೆಡ್‍ಗಳನ್ನು ತ್ವರಿತವಾಗಿ ನಿರ್ಮಿಸಬೇಕು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಸಿನ ಮನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಆರೈಕೆದಾರರಿಗೆ ಸರಿಯಾಗಿ ವೇತನ ಪಾವತಿಸಬೇಕು. ಸಾಮಾಜಿಕ ಪರಿಶೋಧನೆಯಡಿ ಅಡಾಕ್ ಸಮಿತಿ ಸಭೆಗಳನ್ನು ನಡೆಸಿ ಪ್ರಕರಣ ಇತ್ಯರ್ಥಗೊಳಿಸಬೇಕು. ಒಂಬುಡ್ಸ್‌ಮನ್‌ ಪ್ರಕರಣಗಳಲ್ಲಿ ಶೀಘ್ರ ಕ್ರಮ ವಹಿಸಬೇಕು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಸಮಸ್ಯೆ ಕಂಡುಬಂದಿರುವ ಗ್ರಾಮಗಳಲ್ಲಿ ಸಮಸ್ಯೆ ಪರಿಹರಿಸಬೇಕು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆ ನಡೆಸಿ ಸೆಪ್ಟೆಂಬರ್ ಅಂತ್ಯದೊಳಗೆ ಅನುಮೋದನೆ ಪಡೆದುಕೊಳ್ಳಬೇಕು, 

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್ ಸಭೆಯಲ್ಲಿ ಇದ್ದರು.

ತೆರಿಗೆ ಸಂಗ್ರಹಕ್ಕೆ ನೋಡೆಲ್

ಅಧಿಕಾರಿಗಳ ನೇಮಕ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣ ಘನತ್ಯಾಜ್ಯ ನಿರ್ವಹಣೆ ಘಟಕ ಮಲತ್ಯಾಜ್ಯ ಸಂಸ್ಕರಣಾ ಘಟಕ ಗೋಬರ್‌ಧನ್ ಘಟಕ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ಸಮಗ್ರ ಘನ ತ್ಯಾಜ್ಯ ಸಂಪನ್ಮೂಲ ಘಟಕಗಳ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರತಿ ತಿಂಗಳು ತೆರಿಗೆ ಗುರಿ ನಿಗದಿಪಡಿಸಲಾಗಿದ್ದು ಪ್ರತಿ ಬುಧವಾರ ತೆರಿಗೆ ವಸೂಲಾತಿ ಅಭಿಯಾನ ನಡೆಸಬೇಕು ಅಭಿಯಾನದ ಮೇಲ್ವಿಚಾರಣೆಗೆ ನೋಡೆಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಅಧಿಕಾರಿಗಳು ಹೆಚ್ಚಿನ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಕ್ಷಯಮುಕ್ತ ಗ್ರಾಮ ಪಂಚಾಯಿತಿ ಘೋಷಣೆಗೆ ಪಿಡಿಒಗಳು ಶ್ರಮವಹಿಸಬೇಕು ಎಂದು ಸಿಇಒ ಮೋನಾ ರೋತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.