ADVERTISEMENT

ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶ: 5 ಕಂಪನಿಗಳಿಂದ ₹562 ಕೋಟಿ ಹೂಡಿಕೆ

ಟೆಕ್ರೆನ್‌ ಬ್ಯಾಟರೀಸ್‌ನಿಂದ ₹480 ಕೋಟಿ ಬಂಡವಾಳ

ಸೂರ್ಯನಾರಾಯಣ ವಿ
Published 24 ಮಾರ್ಚ್ 2022, 4:12 IST
Last Updated 24 ಮಾರ್ಚ್ 2022, 4:12 IST
ಚಾಮರಾಜನಗರ ತಾಲ್ಲೂಕು ಕೆಲ್ಲಂಬಳ್ಳಿ ಹಾಗೂ ಬದನಗುಪ್ಪೆ ಯಲ್ಲಿರುವ ಕೈಗಾರಿಕಾ ಪ್ರದೇಶ
ಚಾಮರಾಜನಗರ ತಾಲ್ಲೂಕು ಕೆಲ್ಲಂಬಳ್ಳಿ ಹಾಗೂ ಬದನಗುಪ್ಪೆ ಯಲ್ಲಿರುವ ಕೈಗಾರಿಕಾ ಪ್ರದೇಶ   

ಚಾಮರಾಜನಗರ: ಆರ್ಥಿಕವಾಗಿ ಹಿಂದುಳಿದಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಂಡವಾಳ ಹೂಡಲು ಕೈಗಾರಿಕೆಗಳು ಈಗ ಆಸಕ್ತಿ ತೋರುತ್ತಿದ್ದು, 2021ರ ನವೆಂಬರ್‌ನಿಂದ 2022ರ ಮಾರ್ಚ್‌ವರೆಗೆ ₹562.37 ಕೋಟಿ ಬಂಡವಾಳವನ್ನು ಜಿಲ್ಲೆ ಆಕರ್ಷಿಸಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರ ನೇತೃತ್ವದ ರಾಜ್ಯ ಮಟ್ಟದ ಸಮಿತಿಯು ಐದು ಕಂಪನಿಗಳು ಮುಂದಿಟ್ಟಿರುವ ಪ್ರಸ್ತಾವಗಳಿಗೆ ಅನುಮತಿ ನೀಡಿದೆ.

ತಾಲ್ಲೂಕಿನ ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಐದು ಕೈಗಾರಿಕೆಗಳು ತಲೆ ಎತ್ತಲಿವೆ. ಇವುಗಳಿಂದಾಗಿ 755 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿವೆ.

ADVERTISEMENT

ಲೀಥಿಯಂ ಬ್ಯಾಟರಿ ತಯಾರಿಕಾ ಕಂಪನಿಆಂಧ್ರಪ್ರದೇಶದ ಟೆಕ್ರೆನ್‌ ಬ್ಯಾಟರೀಸ್‌ ಪ್ರೈ. ಲಿಮಿಟೆಡ್‌, ₹480 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದೆ. ಕಾರ್ಖಾನೆ ಸ್ಥಾಪನೆಗಾಗಿ 10 ಎಕರೆ ಜಾಗವನ್ನು ಕಂಪನಿ ಕೇಳಿದ್ದು, 200 ಮಂದಿಗೆ ನೇರ ಉದ್ಯೋಗ ಸಿಗಲಿದೆ.

‘ವಾಹನೋದ್ಯಮ ಕ್ಷೇತ್ರದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಚಾರ್ಚಿಂಗ್‌ ಸ್ಟೇಷನ್‌ಗಳ ಸ್ಥಾಪನೆ, ಲೀಥಿಯಂ ಬ್ಯಾಟರಿಗಳ ತಯಾರಿಕೆಗೆ ಹೆಚ್ಚು ಪ್ರಾಮುಖ್ಯ ಸಿಕ್ಕಿದೆ. ಚಾಮರಾಜನಗರದಲ್ಲಿ ಬ್ಯಾಟರಿ ತಯಾರಿಕಾ ಘಟಕ ಸ್ಥಾಪನೆಗೆ ಟೆಕ್ರೆನ್‌ ಬ್ಯಾಟರೀಸ್‌ ಕಂಪನಿ ಮುಂದೆ ಬಂದಿದೆ’ ಎಂದು ಕೈಗಾರಿಕಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ‘ಕರ್ನಾಟಕ ಉದ್ಯೋಗ ಮಿತ್ರ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಲೀಥಿಯಂ ಬ್ಯಾಟರಿ ತಯಾರಿಕಾ ಘಟಕ ಸ್ಥಾಪನೆಗೊಂಡ ನಂತರ ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಚಾಮರಾಜನಗರ ಜಿಲ್ಲೆಯು ಪ್ರಮುಖ ಪಾತ್ರವಹಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನೂ ನಾಲ್ಕು ಕಂಪನಿಗಳು: ಟೆಕ್ರೆನ್‌ ಬ್ಯಾಟರೀಸ್‌ ಮಾತ್ರವಲ್ಲದೆ ಇನ್ನೂ ನಾಲ್ಕು ಕಂಪನಿಗಳು ಜಿಲ್ಲೆಯಲ್ಲಿ ₹82.37 ಕೋಟಿ ಬಂಡವಾಳ ಹೂಡಲಿವೆ.

ಮಂಗಳೂರಿನ ಪ್ಲೈವುಡ್‌ ತಯಾರಿಕಾ ಕಂಪನಿ ಎ.ಕೆ.ಕ್ಲಸ್ಟರ್ಸ್‌ ಪ್ರೈ ಲಿಮಿಟೆಡ್‌ ನಾಲ್ಕು ಎಕರೆ ಜಾಗದಲ್ಲಿ ತನ್ನ ಘಟಕ ಸ್ಥಾಪಿಸಲಿದೆ. ಇದಕ್ಕಾಗಿ ₹15.75 ಕೋಟಿ ಬಂಡವಾಳ ಹೂಡಲಿದೆ. 80 ಜನರಿಗೆ ಉದ್ಯೋಗ ಸಿಗಲಿದೆ.

ಮೈಸೂರಿನ ಶ್ರೀವೃದ್ಧಿ ಇಂಡಸ್ಟ್ರೀಸ್‌ ಕಂಪನಿಯು ಕಾಗದದ ಕಪ್‌, ಕಾಗದದ ಪ್ಲೇಟ್‌ ಹಾಗೂ ಪ್ಯಾಕೇಜಿಂಗ್‌ ಘಟಕವನ್ನು ಒಂದು ಎಕರೆ ಜಾಗದಲ್ಲಿ ₹15.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಮುಂದೆ ಬಂದಿದೆ. 50 ಜನರಿಗೆ ಇಲ್ಲಿ ಕೆಲಸ ಲಭ್ಯವಾಗಲಿದೆ.

ಕಾಗದದ ಕಪ್‌, ಪ್ಲೇಟ್ ಇನ್ನಿತರ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಗಾಗಿ ಚಾಮರಾಜನಗರದ ಚಿರನ್ವಿ ಎಂಟರ್‌ಪ್ರೈಸಸ್‌, ಅರ್ಧ ಎಕರೆ ಜಾಗ ಕೇಳಿದ್ದು, ₹16.12 ಕೋಟಿ ಬಂಡವಾಳ ಹೂಡಲಿದೆ. 30 ಮಂದಿಗೆ ನೇರ ನೌಕರಿ ಸಿಗಲಿದೆ.

ಎಲೆಕ್ಟ್ರಾನಿಕ್ಸ್‌ ಹಾಗೂ ದೂರ ಸಂವಹನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮೈಸೂರಿನ ಕೇನ್ಸ್‌ ಟೆಕ್ನಾಲಜಿ ಇಂಡಿಯಾ ಪ್ರೈ ಲಿಮಿಟೆಡ್‌, ಐದು ಎಕರೆ ಜಾಗದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಉದ್ದೇಶಿಸಿದ್ದು, ₹35 ಕೋಟಿ ಬಂಡವಾಳ ಹೂಡಲಿದೆ. 390 ಮಂದಿಗೆ ಉದ್ಯೋಗ ಸಿಗಲಿದೆ.

‘ಚಾಮರಾಜನಗರದಲ್ಲಿ ಈಗ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದ್ದು, ಕೈಗಾರಿಕೆಗಳನ್ನು ಆಕರ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ದೊಡ್ಡ ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ದೊಡ್ಡ ಯೋಜನೆಗಳು

ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಮೂರು ದೊಡ್ಡ ಯೋಜನೆಗಳು ಶೀಘ್ರ ಆರಂಭವಾಗಲಿದೆ.

ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್‌ ಇಂಡಸ್ಟ್ರೀಸ್‌ 102 ಎಕರೆ ಜಾಗವನ್ನು ಖರೀದಿಸಿದ್ದು, ₹1,699 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಪೇಂಟ್‌ ತಯಾರಿಕಾ ಘಟಕ ತಲೆ ಎತ್ತಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಸಿಎಂ ಹೋಂ ಅಪ್ಲೈನ್ಸಸ್‌ ಪ್ರೈ ಲಿಮಿಟೆಡ್‌ಗೆ 32.5 ಎಕರೆ ಜಾಗ ಹಂಚಿಕೆಯಾಗಿದ್ದು, ₹200.89 ಕೋಟಿ ವೆಚ್ಚದಲ್ಲಿ ಕಾರ್ಖಾನೆ ಸ್ಥಾಪಿಸಲಿದೆ.

‘ಕಲರ್‌ಟೋನ್‌ ಟೆಕ್ಸ್‌ಟೈಲ್‌ ಪ್ರೈ. ಲಿಮಿಟೆಡ್‌, 30 ಎಕರೆ ಜಾಗದಲ್ಲಿ ತನ್ನ ಘಟಕ ನಿರ್ಮಾಣ ಕಾರ್ಯ ಈಗಾಗಲೇ ಆರಂಭಿಸಿದೆ‘ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಉಪನಿರ್ದೇಶಕ ರಾಜೇಂದ್ರ ಪ್ರಸಾದ್‌ ಅವರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

–––

ಕೈಗಾರಿಕಾ ಪ್ರದೇಶದಲ್ಲಿ ಎಲ್ಲ ನಿವೇಶನಗಳಿಗೆ ನೀರು ಪೂರೈಸಲು ಪೈಪ್‌ಲೈನ್‌ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಭದ್ರತಾ ವ್ಯವಸ್ಥೆ ಕಲ್ಪಿಸಬೇಕು
ವಿ.ಪ್ರಭಾಕರ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ

–––

ನೀರು, ವಿದ್ಯುತ್‌ ಸೌಲಭ್ಯ ಕಲ್ಪಿಸಿದ ನಂತರ ಉದ್ಯಮಿಗಳು ಜಿಲ್ಲೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಸರ್ಕಾರವೂ ಸತತ ಪ್ರಯತ್ನ ಮಾಡುತ್ತಿದೆ
ರಾಜೇಂದ್ರ ಪ್ರಸಾದ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.