ADVERTISEMENT

ಚಾಮರಾಜನಗರ ಜಿಲ್ಲಾ ಆಸ್ಪತ್ರೆ: ಸಿಟಿ ಸ್ಕ್ಯಾನಿಂಗ್‌ಗೆ ಕಾಯುವ ಶಿಕ್ಷೆ !

ಆನ್‌ಲೈನ್‌ನಲ್ಲಿ ಸಕಾಲಕ್ಕೆ ಸಿಗದ ಅನುಮತಿ; ಪಡಿಪಾಟಲು ಪಡುತ್ತಿರುವ ರೋಗಿಗಳು

ಬಾಲಚಂದ್ರ ಎಚ್.
Published 14 ಜನವರಿ 2025, 4:42 IST
Last Updated 14 ಜನವರಿ 2025, 4:42 IST
ಜಿಲ್ಲಾ ಆಸ್ಪತ್ರೆ ಹೊರನೋಟ
ಜಿಲ್ಲಾ ಆಸ್ಪತ್ರೆ ಹೊರನೋಟ   

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಸಿಟಿ ಸ್ಕ್ಯಾನ್ ಮಾಡಿಸಲು ಕೆಲಸ ಕಾರ್ಯಗಳನ್ನು ಬಿಟ್ಟು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಬಿಆರ್‌ಕೆ ಯೋಜನೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಡಿಯಲ್ಲಿ ರೋಗಿಗಳು ಉಚಿತವಾಗಿ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಪಡೆಯಲು ಸಾಸ್ಟ್‌ (ಎಸ್‌ಎಎಸ್‌ಟಿ) ಆನ್‌ಲೈನ್‌ ಪೋರ್ಟಲ್‌ನಲ್ಲಿ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸಿದ್ದು ಸಕಾಲಕ್ಕೆ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಸಿಗದೆ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಎರಡು ದಿನಗಳಾದರೂ ಸಿಟಿ ಸ್ಕ್ಯಾನಿಂಗ್ ಅನುಮತಿ ಸಿಗದೆ ರೋಗಿಗಳು ಪರಿತಪಿಸುವಂತಾಗಿದೆ. ಅನುಮತಿಗೆ ಕಾಯುತ್ತ ಆಸ್ಪತ್ರೆಯ ಬಳಿ ಬಿಡಾರ ಹೂಡಬೇಕಾಗಿದೆ ಎಂದು ದೂರುತ್ತಾರೆ ರೋಗಿಗಳ ಸಂಬಂಧಿಗಳು.

ADVERTISEMENT

ಸಮಸ್ಯೆಗೆ ಕಾರಣ: ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ರಾಜ್ಯಮಟ್ಟದಲ್ಲಿ ಪಿಪಿಪಿ ಮಾದರಿಯಲ್ಲಿ ಕ್ರಸ್ನಾ ಡಯಾಗ್ನಾಸ್ಟಿಕ್‌ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು 2017ರಿಂದಲೂ ಉಚಿತವಾಗಿ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಒದಗಿಸುತ್ತಿದೆ.

ಯೋಜನೆಯ ದುರುಪಯೋಗ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಡಿಸೆಂಬರ್‌ನಲ್ಲಿ ಸಿಟಿ ಸ್ಕ್ಯಾನಿಂಗ್ ಸೇವೆ ಪಡೆದುಕೊಳ್ಳುವ ನಿಯಮಗಳನ್ನು ಬದಲಾವಣೆ ಮಾಡಿದ್ದು ಸಾಸ್ಟ್ ಪೋರ್ಟಲ್‌ನಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮ ರೂಪಿಸಿದೆ.

ಹಿಂದೆ ನೇರವಾಗಿ ಸಿಟಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದ ರೋಗಿಗಳು ಈಗ ಎಬಿಆರ್‌ಕೆ ಅರ್ಜಿ ತುಂಬಿ ನೋಡೆಲ್‌ ಆಫೀಸರ್, ವೈದ್ಯರು ಹಾಗೂ ಝಾಂಪ್ಕೊ ಸಿಬ್ಬಂದಿಯಿಂದ ಸಹಿ ಮಾಡಿಸಬೇಕು. ಅರ್ಜಿ‌ಯೊಂದಿಗೆ ರೋಗಿಯ ಆಧಾರ್ ಕಾರ್ಡ್‌, ರೇಷನ್‌ ಕಾರ್ಡ್‌ (ಬಿಪಿಎಲ್‌ ಎಪಿಎಲ್‌), ಕ್ಲಿನಿಕಲ್‌ ಹಿಸ್ಟರಿ, ವೈದ್ಯರ ಶಿಫಾರಸು ಪತ್ರದೊಂದಿಗೆ ಅನುಮತಿ ಕೋರಿ ಸಾಸ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.

ಬೆಂಗಳೂರು ಕೇಂದ್ರ ಕಚೇರಿಯಲ್ಲಿರುವ ಸಾಸ್ಟ್‌ ವೈದ್ಯರು ಅರ್ಜಿ ಪರಿಶೀಲಿಸಿ ಅನುಮತಿ ನೀಡುವವರೆಗೂ ರೋಗಿಗಳು ಕಾಯಬೇಕು. ಹೊಸ ಆನ್‌ಲೈನ್ ಪ್ರಕ್ರಿಯೆಯಲ್ಲಿ ಅರ್ಜಿಗಳ ವಿಲೇವಾರಿ ತಡವಾಗುತ್ತಿರುವುದು ಸಮಸ್ಯೆಗೆ ಕಾರಣ ಎಂಬುದು ರೋಗಿಗಳ ದೂರು.

ಕೆಲವರ ಅರ್ಜಿಗಳಿಗೆ ಒಂದೆರಡು ತಾಸುಗಳಲ್ಲಿ ಅನುಮತಿ ಸಿಕ್ಕರೆ ಕೆಲವು ರೋಗಿಗಳ ಅರ್ಜಿಗಳಿಗೆ ಎರಡು ದಿನವಾದರೂ ಸಿಗುತ್ತಿಲ್ಲ. ಸಾಸ್ಟ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವೈದ್ಯರು ಸಕಾಲದಲ್ಲಿ ವಿಲೇವಾರಿ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ರೋಗಿಗಳು.

ಹಣ ಕೊಟ್ಟರೆ ಅನುಮತಿ ಬೇಕಿಲ್ಲ: ಪಿಪಿಪಿ ಮಾದರಿಯ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೋಗಿಗಳು ಹಣ ಪಾವತಿಸಿದರೆ ಯಾರ ಅನುಮತಿಯೂ ಅಗತ್ಯವಿಲ್ಲ. ವೈದ್ಯರ ಸಲಹಾ ಪತ್ರದ ಆಧಾರದ ಮೇಲೆ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ದುಡ್ಡಿದ್ದವರಿಗೆ ತುರ್ತು ಆರೋಗ್ಯ ಸೇವೆ, ಬಡವರು ಮಾತ್ರ ಕಾಯುವ ಶಿಕ್ಷೆ ಎಂದು ನಗರಸಭಾ ಸದಸ್ಯ ಅಬ್ರಾರ್ ಅಹಮದ್‌ ಅಸಮಾಧಾನ ವ್ಯಕ್ತಪಡಿಸಿದರು.‌

ಒಂದು ದಿನವಾದರೂ ಸಿಗದ ಅನುಮತಿ

14 ವರ್ಷದ ಪುತ್ರ ಅಸ್ರಾರ್ ಅಹಮದ್‌ಗೆ ಮೂಗಿನ ನರಗಳಲ್ಲಿ ಸಮಸ್ಯೆ ಇದ್ದು ಸಿಟಿ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚಿಸಿದ ಹಿನ್ನೆಲೆಯ್ಲಲಿ ಗುರುವಾರ ಸ್ಕ್ಯಾನಿಂಗ್ ಸೆಂಟರ್‌ಗೆ ಬಂದು ಆನ್‌ಲೈನ್ ಅರ್ಜಿ ಹಾಕಿದ್ದೆ. ಒಂದು ದಿನ ಕಳೆದ ಬಳಿಕ ಅರ್ಜಿಗೆ ಅನುಮತಿ ದೊರೆತಿದ್ದು ಈ ಅವಧಿಯಲ್ಲಿ ಹಲವು ಬಾರಿ ಸ್ಕ್ಯಾನಿಂಗ್ ಸೆಂಟ್‌ರ್‌ಗೆ ಅಲೆಯಬೇಕಾಯಿತು. ಹಲವು ರೋಗಿಗಳ ಅರ್ಜಿಗಳು 2 ದಿನವಾದರೂ ವಿಲೇವಾರಿಯಾಗುತ್ತಿಲ್ಲ. ಬಡ ರೋಗಿಗಳಿಗೆ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. –ಅಬ್ರಾರ್ ಅಹಮದ್‌ ರೋಗಿಯ ತಂದೆ

‘ದುರುಪಯೋಗ ತಡೆಗೆ ನಿರ್ಧಾರ’

ಹಿಂದಿದ್ದ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಸಿಟಿ ಸ್ಕ್ಯಾನಿಂಗ್ ಒಳಪಡುತ್ತಿರುವುದು ನಿಗದಿಗಿಂತ ಹೆಚ್ಚು ಸ್ಕ್ಯಾನಿಂಗ್ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಸಾಸ್ಟ್ ಪೋರ್ಟಲ್‌ನಲ್ಲಿ ಪೂರ್ವಾನುಮತಿ ಪಡೆದು ಸ್ಕ್ಯಾನಿಂಗ್‌ಗೆ ಅನುಮತಿ ನೀಡಲಾಗುತ್ತಿದೆ. ಅಪಘಾತ ಸೇರಿದಂತೆ ತುರ್ತು ಅವಘಡಗಳ ಪ್ರಕರಣಗಳಲ್ಲಿ ತುರ್ತು ಅನುಮತಿ ದೊರೆಯುತ್ತದೆ. ಉಳಿಕೆ ಪ್ರಕರಣಗಳಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಜಿಲ್ಲಾ ಆಸ್ಪತ್ರೆಯಲ್ಲಿ ತೀರಾ ವಿಳಂಬವಾಗಿ ಅನುಮತಿ ದೊರೆಯುತ್ತಿರುವ ಬಗ್ಗೆ ದೂರುಗಳು ಬಂದಿಲ್ಲ. –ಡಾ.ಚಿದಂಬರ ಡಿಎಚ್‌ಒ

ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆ ತರಲು ಯೋಜನೆ ದುರುಪಯೋಗ ತಡೆಗೆ ಸರ್ಕಾರ ಸಿಟಿ ಸ್ಕ್ಯಾನ್‌ಗೆ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯ ಮಾಡಿದೆ. ರೋಗಿಗಳಿಗೆ ತೊಂದರೆಯಾಗುತ್ತಿದ್ದರೆ ಪರಿಶೀಲಿಸಿ ಸರಿಪಡಿಸಲಾಗುವುದು.
–ಮಹೇಶ್‌, ಜಿಲ್ಲಾ ಸರ್ಜನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.