ADVERTISEMENT

ಕೋವಿಡ್‌: ತಬ್ಬಲಿಯಾದ ಬಾಲಕಿಗೆ ಸಹಾಯಧನ

ಬಾಲ ಸೇವಾ ಯೋಜನೆ ಅನುಷ್ಠಾನ; ಪಿಎಂ ಕೇರ್ಸ್‌ನಿಂದಲೂ ನೆರವು

ಸೂರ್ಯನಾರಾಯಣ ವಿ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೋವಿಡ್‌ನಿಂ‌ದಾಗಿ ತಂದೆ–ತಾಯಿಯನ್ನು ಕಳೆದುಕೊಂಡ ಜಿಲ್ಲೆಯ ಬಾಲಕಿಯೊಬ್ಬಳಿಗೆ ಸರ್ಕಾರವು ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು ₹ 3,500ರಂತೆ ಪೋಷಣಾ ಧನವನ್ನು ನೀಡುತ್ತಿದೆ.

ಜಿಲ್ಲೆಯಲ್ಲಿ ಸೋಂಕಿನಿಂದಾಗಿ ಪೋಷಕರನ್ನು ಕಳೆದುಕೊಂಡ ಮೂವರು ಮಕ್ಕಳಿದ್ದಾರೆ. ಆದರೆ, ಕೋವಿಡ್‌ನಿಂದಾಗಿ ತಂದೆ–ತಾಯಿ ಇಬ್ಬರೂ ಮೃತಪಟ್ಟು ಮಗು ಅನಾಥವಾದ ಪ್ರಕರಣ ಇರುವುದು ಒಂದೇ. ಉಳಿದ ಎರಡು ಪ್ರಕರಣಗಳಲ್ಲಿ ಇಬ್ಬರು ಪೋಷಕರ ಪೈಕಿ ಒಬ್ಬರು ಮೊದಲೇ ಮೃತಪಟ್ಟಿದ್ದರು. ಇನ್ನೊಬ್ಬರು ಸೋಂಕಿನಿಂದಾಗಿ ಕೊನೆ ಉಸಿರೆಳೆದಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯ ಐದೂವರೆ ವರ್ಷದ ಬಾಲಕಿ, ತಂದೆ–ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಈಗ ಚಿಕ್ಕಮ್ಮ, ಚಿಕ್ಕಪ್ಪನ ಆರೈಕೆಯಲ್ಲಿ ಬೆಳೆಯುತ್ತಿದ್ದಾಳೆ.

ADVERTISEMENT

ಚಾಮರಾಜನಗರ, ಹನೂರು ತಾಲ್ಲೂಕಿನ ರಾಮಪುರದ ತಲಾ ಒಬ್ಬರು ಕೋವಿಡ್‌ನಿಂದಾಗಿ ಇದ್ದ ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ.

ಬಾಲ ಸೇವಾ ಯೋಜನೆ: ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯನ್ನು ಕಳೆದ ವರ್ಷ ಘೋಷಿಸಿತ್ತು. ಇದರಡಿಯಲ್ಲಿ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಅವರ ಪೋಷಣೆಗೆ ಅನುಕೂಲವಾಗುವಂತೆ ಪ್ರತಿ ತಿಂಗಳೂ ಮಕ್ಕಳ ಖಾತೆಗೆ ₹ 3,500 ಹಣವನ್ನು ಜಮೆ ಮಾಡಲಾಗುತ್ತದೆ. ಇದರ ಜೊತೆಗೆ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ (ಆಯುಷ್ಮಾನ್‌ ಭಾರತ್‌ ಯೋಜನೆಯಡಿ ₹ 5 ಲಕ್ಷದವರೆಗೆ ಆರೋಗ್ಯ ವಿಮೆ), ಹಾಸ್ಟೆಲ್‌ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ.

ಜಿಲ್ಲೆಯಲ್ಲಿ ತಬ್ಬಲಿಗಳಾಗಿರುವ ಮೂವರು ಮಕ್ಕಳ ಪೈಕಿ ಬಾಲ ಸೇವಾ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುವುದು ಕೊತ್ತಲವಾಡಿಯ ಐದೂವರೆ ವರ್ಷದ ಬಾಲಕಿ ಮಾತ್ರ.

‘ಬಾಲಕಿಗೆ ಪ್ರತಿ ತಿಂಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ₹ 3,500 ಜಮೆ ಆಗುತ್ತಿದೆ. ಬಾಲಕಿ ಇನ್ನೂ ಶಾಲೆಗೆ ಹೋಗದಿರುವುದರಿಂದ ಶಿಕ್ಷಣ, ಹಾಸ್ಟೆಲ್‌ ಸೌಲಭ್ಯಗಳ ಅಗತ್ಯ ಇನ್ನೂ ಬಂದಿಲ್ಲ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಆಕೆಗೆ ಕಲ್ಪಿಸಲು ನಾವು ವ್ಯವಸ್ಥೆ ಮಾಡಿದ್ದೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ತಿಂಗಳು ₹ 3,500 ಬರುತ್ತಿರುವುದನ್ನು ಬಾಲಕಿಯ ಪೋಷಕರಾದ ಮಹದೇವಸ್ವಾಮಿ ಖಚಿತ ಪಡಿಸಿದರು.

‘ಮಗಳು ಈಗ ನಮ್ಮೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಇನ್ನೂ ಆಕೆಯನ್ನು ಶಾಲೆಗೆ ಸೇರಿಸಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಸೇರಿಸುತ್ತೇವೆ. ಹಲವು ದಾನಿಗಳು ನಮಗೆ ನೆರವು ನೀಡಿದ್ದಾರೆ. ಸರ್ಕಾರ ಈಗ ಪ್ರತಿ ತಿಂಗಳು ₹ 3,500 ಕೊಡುತ್ತಿದೆ. ಮೊನ್ನೆ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಘೋಷಿಸಿದ್ದ ₹ 1 ಲಕ್ಷ ಧನ ಸಹಾಯ ಸಿಕ್ಕಿದೆ’ ಎಂದು ಮಹದೇವಸ್ವಾಮಿ ತಿಳಿಸಿದರು.

ಪಿಎಂ ಕೇರ್ಸ್‌ ನೆರವು: ‘ರಾಜ್ಯ ಸರ್ಕಾರದ ನೆರವು ಮಾತ್ರವಲ್ಲದೇ, ಕೇಂದ್ರ ಸರ್ಕಾರದಿಂದ ಪಿಎಂ ಕೇರ್ಸ್‌ನ ಸೌಲಭ್ಯವೂ ಬಾಲಕಿಗೆ ಸಿಕ್ಕಿದೆ. ಇದರಡಿ ಬಾಲಕಿಗೆ 23 ವರ್ಷವಾಗುವಾಗ ₹ 10 ಲಕ್ಷ ನಗದು ಸಿಗಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿ, ಬಾಲಕಿಯ ಹೆಸರಿನಲ್ಲಿ ಈಗಾಗಲೇ ಜಂಟಿ ಖಾತೆ ತೆರೆಯಲಾಗಿದೆ’ ಎಂದು ಗೋವಿಂದರಾಜು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ತಬ್ಬಲಿಯಾಗಿರುವ ಇನ್ನಿಬ್ಬರು ಮಕ್ಕಳಿದ್ದು, ಅವರಿಗೆ ಬಾಲ ಸೇವಾ ಯೋಜನೆ ಅನ್ವಯವಾಗುವುದಿಲ್ಲ. ಆದರೆ, ಪಿಎಂ ಕೇರ್ಸ್‌ನ ಸೌಲಭ್ಯ ಸಿಗಲಿದೆ. ಉಳಿದಂತೆ ಉಚಿತ ಶಿಕ್ಷಣ, ಅವರು ಬಯಸಿದರೆ ವಸತಿ ಶಾಲೆಯಲ್ಲಿ ಶಿಕ್ಷಣ, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ಸೇವೆ ಸೇರಿದಂತೆ ಎಲ್ಲ ಸೌಲಭ್ಯಗಳು ಸಿಗಲಿವೆ’ ಎಂದು ಹೇಳಿದರು.

ಇದಲ್ಲದೇ, ಅನಾಥರಾದ ಮಕ್ಕಳ ಕುಟುಂಬ ಬಿಪಿಎಲ್‌ ಕಾರ್ಡ್‌ದಾರರಾಗಿದ್ದರೆ, ಸರ್ಕಾರ ಘೋಷಿಸಿರುವ ₹ 1 ಲಕ್ಷ ಪರಿಹಾರ ಹಾಗೂ ಕೇಂದ್ರ ಸರ್ಕಾರದ ₹ 50 ಸಾವಿರ ಪರಿಹಾರ ಧನವೂ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

166 ಮಕ್ಕಳಿಗೆ ಒಬ್ಬರೇ ಪೋಷಕ

ಕೋವಿಡ್‌ನಿಂದಾಗಿ ಪೋಷಕರೊಬ್ಬರನ್ನು ಕಳೆದು‌ಕೊಂಡ 166 ಮಕ್ಕಳು ಇದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಸದ್ಯ ಇಷ್ಟು ಮಕ್ಕಳ ಮಾಹಿತಿ ಇದ್ದು, ಮಾಹಿತಿ ದೊರೆತಂತೆ ಈ ಸಂಖ್ಯೆ ಬದಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಬಾಲ ಸ್ವರಾಜ್‌ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ.

ಒಬ್ಬರೇ ಪೋಷಕರು ಇರುವ ಬಿಪಿಎಲ್‌ ಕುಟುಂಬದ ಮಕ್ಕಳಿಗೆ ನೆರವಾಗಲು ಅವಕಾಶ ಇದೆ. ಇದಲ್ಲದೇ, ಹಾಸ್ಟೆಲ್‌ಗಳಲ್ಲಿ, ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಹಕಾರ ನೀಡಲಾಗುತ್ತದೆ. ಉನ್ನತ ಶಿಕ್ಷಣ ಮಾಡಲು ಮುಂದಾಗುವವರಿಗೂ ನೆರವು ನೀಡಲಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

––

ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಲ ಸೇವಾ ಯೋಜನೆಯ ಫಲಾನುಭವಿ ಮಗು ಜಿಲ್ಲೆಯಲ್ಲಿ ಒಂದೇ ಇದೆ

–ಗೀತಾಲಕ್ಷ್ಮಿ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.