ADVERTISEMENT

ಚಾಮರಾಜನಗರ: ಕನಕದಾಸ ಜಯಂತಿ ಸರಳ ಆಚರಣೆ

ಸಂತ ಶ್ರೇಷ್ಠನ ಆದರ್ಶ, ತತ್ವ, ಸಿದ್ಧಾಂತ, ಕೊಡುಗೆಗಳ ಸ್ಮರಿಸಿದ ಗಣ್ಯರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:49 IST
Last Updated 3 ಡಿಸೆಂಬರ್ 2020, 14:49 IST
ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಚಾಮರಾಜನಗರ: ಸಂತ ಶ್ರೇಷ್ಠ ಎಂದು ಗುರುತಿಸಿಕೊಂಡಿರುವ ಕನಕದಾಸರ 533ನೇ ಜಯಂತಿಯನ್ನು ನಗರದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್, ಸಿ.ಎನ್. ಬಾಲರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮತ್ತಿತರರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಸಿ. ಪುಟ್ಟರಂಗಶೆಟ್ಟಿ ಅವರು, ‘ತಾರತಮ್ಯ, ಜಾತೀಯತೆ ಎಲ್ಲೆಡೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನಕದಾಸರದ್ದು ಆದರ್ಶ ವ್ಯಕ್ತಿತ್ವ. ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಬಡಿದೆಚ್ಚರಿಸಿದ ಕನಕದಾಸರು ಇಂದಿಗೂ ಅನುಕರಣೀಯರಾಗಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಕನಕದಾಸರ ಸದ್ವಿಚಾರಗಳನ್ನು ಆಲಿಸುವುದು ಸತ್ಸಂಗದಲ್ಲಿ ಮಾತ್ರ ಸಾಧ್ಯ. ದಂಡನಾಯಕನಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಸಂತನಾಗುವುದು ಸುಲಭದ ಮಾತಲ್ಲ. ಕವಿಯಾಗಿ, ಬಂಡಾಯಗಾರನಾಗಿ, ಆಧ್ಯಾತ್ಮಿಕ ವೈಚಾರಿಕತೆಯುಳ್ಳ ಬಹುಸಂಪನ್ನನಾಗಿ ಕನಕದಾಸರನ್ನು ನಾವು ನೋಡಬಹುದು. ಕನ್ನಡ ಸಾಹಿತ್ಯ, ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ ಕನಕದಾಸರು ಸಂತರಲ್ಲಿ ವಿಶಿಷ್ಟರಾಗಿದ್ದಾರೆ’ ಎಂದರು.

ADVERTISEMENT

‘ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲಿ ಮನೆಮಾಡಿದ್ದ ಮೌಢ್ಯ. ಕಂದಾಚಾರ, ಅಂಕುಡೊಂಕುಗಳನ್ನು ತಿದ್ದಿದ ಬಸವಣ್ಣ ಹಾಗೂ ಇತರ ಶರಣರ ಪರಂಪರೆಯನ್ನು ಕನಕದಾಸರು ಮಂದುವರೆಸಿದ್ದರು ಎಂದರೆ ತಪ್ಪಾಗಲಾರದು. ಕನಕದಾಸರು ಸಂತರಷ್ಟೇ ಅಲ್ಲ, ಅವರು ಸಮಾಜ ಹಾಗೂ ವ್ಯಕ್ತಿಯ ನಡುವಿನ ಸಮನ್ವಯ ಕೊಂಡಿ. ಸಮಾಜವನ್ನು ಎದುರು ಹಾಕಿಕೊಳ್ಳದೇ ಅದನ್ನು ತಿದ್ದುವ ಕಾರ್ಯ ಮಾಡಿದ ಕನಕದಾಸರು ಹೊಸ ಹೊಸ ವಿಚಾರಧಾರೆಗಳತ್ತ ಜನರನ್ನು ಕೊಂಡೊಯ್ದರು’ ಎಂದು ಅವರು ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್. ಬಾಲರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಕುಲಗಾಣ ಶಾಂತಮೂರ್ತಿ ಅವರು ಮಾತನಾಡಿದರು.

ಪುಟ್ಟರಾಜ ಗವಾಯಿಯವರ ಶಿಷ್ಯರು ಹಾಗೂ ದೀಪ ದೃಷ್ಟಿ ದೋಷ ಹೊಂದಿರುವ ಮಕ್ಕಳ ಶಾಲೆಯ ಸಂಗೀತ ಶಿಕ್ಷಕರಾದ ಏಕನಾಥ್ ಅವರು ನಡೆಸಿಕೊಟ್ಟ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಜಾನಪದ ಅಕಾಡಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಸಮುದಾಯದ ಮುಖಂಡರಾದ ಶಿವರಾಮು, ರವಿಕುಮಾರ್, ಬಸಪ್ಪನಪಾಳ್ಯ ನಟರಾಜು, ಮಹದೇವೆಗೌಡ, ರಾಜಶೇಖರ್, ಉಮೇಶ್, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ನಿಜಧ್ವನಿ ಗೋವಿಂದರಾಜು, ಸಂಘಸೇನಾ, ಬ್ಯಾಡಮೂಡ್ಲು ಬಸವಣ್ಣ, ಸೋಮಣ್ಣ, ಜಿ. ಬಂಗಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.