ADVERTISEMENT

ಚಾಮರಾಜನಗರ | ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ

ಏ.24ರಂದು ಸಚಿವ ಸಂಪುಟ ಸಭೆ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 6:16 IST
Last Updated 19 ಏಪ್ರಿಲ್ 2025, 6:16 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24ರಂದು ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಸಿದ್ಧತೆ ಪರಿಶೀಲಿಸಿತು
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24ರಂದು ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಸಿದ್ಧತೆ ಪರಿಶೀಲಿಸಿತು   

ಮಹದೇಶ್ವರ ಬೆಟ್ಟ: ಜಿಲ್ಲೆಯ ಗಡಿಭಾಗವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24ರಂದು ಸಚಿವ ಸಂಪುಟ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಸಿದ್ಧತೆ ಪರಿಶೀಲಿಸಿತು.

ಮಹದೇಶ್ವರ ಬೆಟ್ಟಕ್ಕೆ ಪ್ರವೇಶಿಸುವ ಸ್ಥಳವನ್ನು ಪರಿಶೀಲಿಸಿ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಮಾಡಬೇಕು, ವಾಸ್ತವ್ಯಕ್ಕೆ ಕೊಠಡಿಗಳನ್ನು ಮೀಸಲಿರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ಹೆಲಿಪ್ಯಾಡ್‌ಗೆ ಭೇಟಿನೀಡಿದ ಜಿಲ್ಲಾಧಿಕಾರಿ ಈಗಿರುವ ಹೆಲಿಪ್ಯಾಡ್‌ನಿಂದ 50 ಮೀಟರ್ ದೂರದಲ್ಲಿ ಆಚೆ ಹಾಗೂ ಈಚೆಗೆ ಮತ್ತೆರಡು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಿ, ಸಾಲೂರು ಮಠದ ಶಾಲಾ ಆವರಣದಲ್ಲಿ ಒಂದು ಹೆಲಿಪ್ಯಾಡ್ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ದೀಪದಗಿರಿ ಒಡ್ಡಿನಲ್ಲಿ ನಡೆಯುವ ಸಭೆಗೆ ಶಾಸಕರಿಗೆ ಮಾತ್ರ ಅವಕಾಶ ಇದ್ದು, ಬೆಂಬಲಿಗರಿಗೆ ಅವಕಾಶ ಇರುವುದಿಲ್ಲ. ಸ್ಥಳ ಚಿಕ್ಕದಾಗಿರುವುದರಿಂದ ಅತಿ ಮುಖ್ಯ ವ್ಯಕ್ತಿಗಳಿಗೆ ಮಾತ್ರ ಪಾಸ್ ವಿತರಿಸಿ, ಭಾಗವಹಿಸಲು ಪೂರ್ವಾನುಮತಿ ಪಡೆಯಬೇಕು. ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ತಪಸಣಾ ಕೇಂದ್ರ ಸ್ಥಾಪಿಸಿ ಸಭೆಗೆ ಬರುವರನ್ನು ತಪಾಸಣೆ ಮಾಡಿ ಒಳಗೆ ಬಿಡಬೇಕು. ಕ್ಷೇತ್ರಕ್ಕೆ ಭೇಟಿನೀಡುವ ಭಕ್ತರಿಗೆ, ಸಾಮಾನ್ಯ ವ್ಯಕ್ತಿಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಸಂಪುಟ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ. ಚೆಲುವ ಚಾಮರಾಜನಗರ ರೂಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಸಿಗಲಿದೆ. ಈಗಾಗಲೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಹನೂರು ತಾಲ್ಲೂಕಿನ ಜಲತ್ವ ಸಮಸ್ಯೆಗಳಿಗೆ ಪೂರಕವಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಸಂಪುಟ ಸಭೆಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಇಲಾಖೆಯ ಅಧಿಕಾರಿಗಳಿಗೂ ಜವಾಬ್ದಾರಿ ವಹಿಸಲಾಗಿದ್ದು ಲೋಪದೋಷಗಳಿಲ್ಲದೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ ತಯಾರಿಸಲಾಗಿದ್ದು, ಸಂಪುಟದಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ. ಕೋಟ್ಯಂತರ ಭಕ್ತರ ಆರಾಧ್ಯ ದೈವವಾದ ಮಾದಪ್ಪನ ಸನ್ನಿಧಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ರಸ್ತೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ಜಾರಿ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಮುಖ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಂಪುಟ ಸಭೆಯಲ್ಲಿ ವಿಶೇಷ ಪ್ಯಾಕೇಜ್ ದೊರೆಯುವ ಭರವಸೆ ಇದೆ ಎಂದರು.

ಉದ್ಘಾಟನೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳಾದ ದೊಡ್ಡಕೆರೆ ಅಭಿವೃದ್ದಿ, ಯುಜಿಡಿ, 512 ಕೊಠಡಿಗಳ ಉದ್ಘಾಟನೆ, ಸೋಲಾರ್ ಘಟಕದ ಉದ್ಘಾಟನೆ, 4,000 ಜನ ಕುಳಿತು ಪ್ರಸಾದ ಸೇವಿಸುವ ದಾಸೋಹ ಕಟ್ಟಡಕ್ಕೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಸಮಗ್ರ ಅಭಿವೃದ್ಧಿಗೂ ಒತ್ತು ಸಿಗಲಿದೆ. ಹನೂರು ಕ್ಷೇತ್ರದ ಜನಗಳ ಆಶಯದಂತೆ ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿದೆ ಎಂದು ಶಾಸಕ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಎಸ್‌ಪಿ ಬಿ.ಟಿ.ಕವಿತಾ, ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಚಿವ ಸಂಪುಟ ಸಭೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಮಹದೇಶ್ವರ ಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿತು
ಸಚಿವ ಸಂಪುಟ ಸಭೆ ಪೂರ್ವಭಾವಿಯಾಗಿ ಶುಕ್ರವಾರ ಮಹದೇಶ್ವರ ಬೆಟ್ಟದಲ್ಲಿ ಸಿದ್ಧತೆ ನಡೆಯಿತು
ಹೆಚ್ಚುವರಿ ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ ಸೂಚನೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವ ಸಿಎಂ ಭರದಿಂದ ಸಾಗಿದೆ ಸಿದ್ಧತಾ ಕಾರ್ಯಗಳು

ತುರ್ತು ವಾಹನ ಕೊಡುಗೆ

ಮಲೆ ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ 18 ಹಳ್ಳಿಗಳ ಗ್ರಾಮಸ್ಥರು ತುರ್ತು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ಕ್ಷೇತ್ರದ ಪ್ರಾಧಿಕಾರದ ವತಿಯಿಂದ ₹ 18.5 ಲಕ್ಷ ವೆಚ್ಚದಲ್ಲಿ ತುರ್ತು ವಾಹನವನ್ನು ಶಾಸಕ ಮಂಜುನಾಥ್ ಸಮ್ಮುಖದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ವಾಹನಸ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಪ್ರಾಧಿಕಾರ ಭರಿಸಲಿದೆ. ತುರ್ತು ಸಂದರ್ಭಗಳಲ್ಲಿ ಪ್ರಾಧಿಕಾರದ ಕಚೇರಿ ಅಥವಾ ಆರೋಗ್ಯ ಕೇಂದ್ರ ಸಂಪರ್ಕಿಸಿದರೆ ಸೇವೆ ಒದಗಿಸಲಾಗುವುದು ಇದು ಉಚಿತ ಸೇವೆಯಾಗಿದ್ದು ಕಾಡಂಚಿನ ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದರು.

ಪರಿಹಾರದ ಭರವಸೆ

ದೀಪದಗಿರಿ ಒಡ್ಡಿನಲ್ಲಿ 108 ಅಡಿ ಮಹದೇಶ್ವರ ಸ್ವಾಮಿಯ ಪ್ರತಿಮೆ ನಿರ್ಮಾಣಕ್ಕೆ ಜಮೀನು ನೀಡಿರುವ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ಭೂಮಿ ಕಳೆದುಕೊಂಡವರು ಶಾಸಕರ ಬಳಿ ಅಳಲು ತೋಡಿಕೊಂಡರು. ಮಾದೇಶ್ವರನ ಸನ್ನಿಧಿಗೆ ಜಮೀನನ್ನು ನೀಡಿದವರಿಗೆ ಸೂಕ್ತ ಪರಿಹಾರ ಕೊಡಿಸುವಾದಿ ಶಾಸಕ ಮಂಜುನಾಥ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.