ADVERTISEMENT

ಚಾಮರಾಜನಗರ: ಹೊಸ ವರ್ಷಕ್ಕೆ ಸರಳ ಸ್ವಾಗತ

ಬಂಡೀಪುರ, ಹಿ‌ಮವದ್‌ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ದಂಡು, ಮಹದೇಶ್ವರ ಬೆಟ್ಟ, ರಂಗನ ಬೆಟ್ಟಗಳಲ್ಲಿ ಕಡಿಮೆ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 14:13 IST
Last Updated 1 ಜನವರಿ 2021, 14:13 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು   

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ಜನರು ಹೊಸ ವರ್ಷವನ್ನು ಸರಳವಾಗಿ ಸಂಭ್ರಮದಿಂದ ಬರಮಾಡಿಕೊಂಡರು. ಕೋವಿಡ್‌ ಕಾರಣದಿಂದ ರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ನಿಷೇಧ ಇದ್ದುದರಿಂದ ನಗರ, ಪಟ್ಟಣಗಳಲ್ಲಿ ಹೆಚ್ಚು ಜನರು ಕಂಡು ಬರಲಿಲ್ಲ.

ಹಾಗಿದ್ದರೂ, ನಗರ ನಿವಾಸಿಗಳು ತಮ್ಮ ಮನೆಗಳ ಬಳಿ ಪಟಾಕಿಗಳನ್ನು ಸಿಡಿಸಿದರು. ಕೇಕ್‌ ಕತ್ತರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಗ್ರಾಮೀಣ ಭಾಗಗಳಲ್ಲೂ ಯುವಕರು ಹೊಸ ವರ್ಷವನ್ನು ಸ್ವಾಗತಿಸಿದರು. ರಸ್ತೆಗಳಲ್ಲಿ ಸ್ವಾಗತಕೋರುವ ಸಂದೇಶಗಳನ್ನು ಬರೆದು ಸಂಭ್ರಮಿಸಿದರು.

ಸ್ನೇಹಿತರಿಗೆ, ನೆಂಟರಿಷ್ಟರಿಗೆ ಹೊಸ ವರ್ಷದ ಶುಭಾಶಯ ತಿಳಿಸಲು ಜನರು ಸಾಮಾಜಿಕ ಜಾಲತಾಣಗಳ ಮೊರೆ ಹೋದರು.

ADVERTISEMENT

ಹೊಸ ವರ್ಷದ ಮೊದಲ ದಿನ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಹಿಂದೂಗಳು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಭಕ್ತರ ಸಂಖ್ಯೆ ಕಡಿಮೆ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸೇರುತ್ತಾರೆ. ಈ ಬಾರಿ ಕೋವಿಡ್‌ ಕಾರಣದಿಂದ ಹೊಸ ವ‌ರ್ಷಾಚರಣೆಗೆ ಹಲವು ನಿರ್ಬಂಧಗಳು ಹೇರಿದ್ದರಿಂದ ಹೊರಗಡೆಯಿಂದ ಹೆಚ್ಚಿನ ಭಕ್ತರು ಬಂದಿರಲಿಲ್ಲ.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ ಪ್ರದೇಶದ ಐದು ಕಿ.ಮೀ ವ್ಯಾಪ್ತಿ, ಹೊಗೆನಕಲ್‌ ಜಲ‍ಪಾತ, ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ–ಸುವರ್ಣಾವತಿ ಜಲಾಶಯಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು.

ಗೋಪಾಲಸ್ವಾಮಿಬೆಟ್ಟದಲ್ಲಿ ಜನಜಂಗುಳಿ

ಆದರೆ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರ ಮತ್ತು ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ವರ್ಷದ ಮೊದಲ ದಿನ ಪ್ರವಾಸಿಗರ ದಂಡೇ ಹರಿದು ಬಂತು.

ಹೊಸ ವರ್ಷದ ಪ್ರಯುಕ್ತಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 10ಕ್ಕೂ ಹೆಚ್ಚು ಬಸ್‌ಗಳನ್ನು ಬಿಡಲಾಯಿತು. ಧನುರ್ಮಾಸ ಕಾರಣಕ್ಕೆ ನೂತನ ವಧು-ವರರು ಕೂಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಂಡೀಪುರ ಸಫಾರಿಗೆ ಬೆಳಗ್ಗೆ ಒಮ್ಮಲೆ ನೂರಾರು ಮಂದಿ ಬಂದ ಕಾರಣ ಎಲ್ಲರಿಗೂ ಟಿಕೆಟ್ ಸಿಗಲಿಲ್ಲ. ಸಂಜೆ ಸಫಾರಿಗೆ ಬಂದಿದ್ದವರ ಸಂಖ್ಯೆಯೂ ಹೆಚ್ಚಿತ್ತು.

ಬೀದಿ ಬದಿ ವ್ಯಾಪಾರ ಜೋರು: ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಫಾರಿ, ದೇವಸ್ಥಾನಗಳಿಗೆ ತೆರಳಿದ ಹಿನ್ನೆಲೆಯಲ್ಲಿ ಊಟಿ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚಿನ ವಹಿವಾಟು ನಡೆಯಿತು. ಎಳೆ ನೀರು, ಟೀ, ಜ್ಯೂಸ್ ಸೇರಿದಂತೆ ತಂಪು ಪಾನಿಯಗಳಿಗೆ ಬೇಡಿಕೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.