ADVERTISEMENT

ಲಾಟರಿ ಹೊಡೆದು ಸಿ.ಎಂ ಆದ ಸಿದ್ದರಾಮಯ್ಯ: ಈಶ್ವರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 12:39 IST
Last Updated 20 ಜೂನ್ 2020, 12:39 IST
   

ಚಾಮರಾಜನಗರ: ಸಿದ್ದರಾಮಯ್ಯ ಅವರು ಲಾಟರಿ ಹೊಡೆದಿದ್ದರಿಂದ ಮುಖ್ಯಮಂತ್ರಿಯಾದರೇ ವಿನಾ ಸ್ವಂತ ಶಕ್ತಿಯಿಂದ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷ‌ದಿಂದ ಲಾಭ ಮಾಡಿಕೊಂಡು, ಜಾತಿಯ ಹೆಸರು ಹೇಳಿಕೊಳ್ಳುತ್ತಾ ಬಂದರು. ಬಿಜೆಪಿ, ಕೆಜೆಪಿ ಎಂದು ನಮ್ಮ ಪಕ್ಷ ಎರಡು ಭಾಗವಾಗಿದ್ದರಿಂದ ಮತಗಳು ವಿಭಜನೆಯಾಗಿದ್ದರಿಂದ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರು’ ಎಂದು ಟೀಕಿಸಿದರು.

ತಮಗೆ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಅಡಗೂರು ಎಚ್‌.ವಿಶ್ವನಾಥ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ‘ಸಿದ್ದರಾಮಯ್ಯ ಎಷ್ಟು ಕುತಂತ್ರಿ ಎಂಬುದು ವಿಶ್ವನಾಥ್‌ಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಹೈಕಮಾಂಡ್‌ವರೆಗೆ ಹೋಗಬೇಕಾಗಿಲ್ಲ. ಕುತಂತ್ರವನ್ನು ಎಲ್ಲಿ ಬೇಕಾದರೂ ಮಾಡಬಹುದು. ಸಿದ್ದರಾಮಯ್ಯ ಅವರ ಈ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಲೇ ಇದೆ. ವಿಶ್ವನಾಥ್‌ ಅವರು ಒಬ್ಬರೇ ಅಂತಲ್ಲ. ತಾನು ಮುಖ್ಯಮಂತ್ರಿ ಆಗಬೇಕು ಎಂಬ ಸ್ವಾರ್ಥಕ್ಕೆ ಉಳಿದ ಎಲ್ಲರನ್ನೂ ಬಲಿತೆಗೆದುಕೊಳ್ಳುವುದರಲ್ಲಿ ಸಿದ್ದರಾಮಯ್ಯ ಅವರು ನಿಸ್ಸೀಮ. ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರು, ಸೇರಿದಂತೆ ವಿವಿಧ ಜಾತಿಗಳ ಹೆಸರು ಹೇಳುತ್ತಲೇ, ಕಾಂಗ್ರೆಸ್‌ ಅನ್ನು ಸೋಲಿಸಿದರು. ಅಧಿಕಾರ ಕಳೆದುಕೊಂಡಿದ್ದು ಮಾತ್ರವಲ್ಲದೇ, ಚಾಮುಂಡೇಶ್ವರಿಯಲ್ಲೂ ಸೋತರು. ನಮ್ಮ ರಾಜ್ಯದಲ್ಲಿ ಕುತಂತ್ರ ರಾಜಕಾರಣ ನಡೆಯುವುದಿಲ್ಲ. ನೇರ ರಾಜಕಾರಣ ಖಂಡಿತ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಜಾತಿ ಲಾಭ ಪಡೆವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ. ಅವರು ಸ್ವಜಾತಿಯವರನ್ನು ಮಾತ್ರ ಅಲ್ಲ, ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರೂ ತುಳಿಯುತ್ತಾರೆ. ಅವರು ಮುಖ್ಯಮಂತ್ರಿಯಾಗಬೇಕಷ್ಟೆ’ ಎಂದರು.

ಯೋಗ್ಯತೆ ಇಲ್ಲ: ಕೇಂದ್ರ ಸರ್ಕಾರದಿಂದ ಅನುದಾನ ತರಲು ಬಿ.ಎಸ್‌.ಯಡಿಯೂರಪ್ಪ ಅವರಿಗೆ ದಂ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ದಂ ಇದ್ದಂತಹ ವ್ಯಕ್ತಿ ಯಾಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು, ಕಾಂಗ್ರೆಸ್‌ ಅನ್ನು ಯಾಕೆ ಹಾಳು ಮಾಡಿದರು? ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು? ಬೇರೆ ಕಡೆಗೆ ಓಡಿ ಹೋಗಿ ಚುನಾವಣೆಗೆ ಯಾಕೆ ನಿಂತರು? ‘ದಂ’ ಪದವನ್ನು ಹೇಳುವ ಯೋಗ್ಯತೆಯೂ ಇವರಿಗಿಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.