ADVERTISEMENT

ಚಾಮರಾಜನಗರ | ಹೊಸ ಒಪಿಡಿ, ತುರ್ತು ಚಿಕಿತ್ಸಾ ಘಟಕ ಉದ್ಘಾಟನೆ

ಜಿಲ್ಲಾಸ್ಪತ್ರೆಯ‌ಲ್ಲಿ ₹50 ಲಕ್ಷ ಹಾಗೂ ₹8 ಲಕ್ಷ ವೆಚ್ಚದಲ್ಲಿ ನಿರ್ಮಾಣ, ಇ–‌ಕಚೇರಿ ವ್ಯವಸ್ಥೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:24 IST
Last Updated 19 ಜೂನ್ 2020, 15:24 IST
ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರು ಹೊಸ ಹೊರರೋಗಿ ವಿಭಾಗವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಇದ್ದಾರೆ
ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರು ಹೊಸ ಹೊರರೋಗಿ ವಿಭಾಗವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಇದ್ದಾರೆ   

ಚಾಮರಾಜನಗರ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ₹50 ಲಕ್ಷ ನಿರ್ಮಿಸಲಾಗಿರುವ ಹೊರರೋಗಿಗಳ ವಿಭಾಗ (ಒಪಿಡಿ) ಹಾಗೂ ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ತುರ್ತು ನಿಗಾ ಘಟಕ ವಾರ್ಡ್ ಅನ್ನು ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರು ಮೂಲಕ ಹೊಸ ಒಪಿಡಿಯನ್ನು ಉದ್ಘಾಟಿಸಿದರು.

ಸಿ.ಪುಟ್ಟರಂಗಶೆಟ್ಟಿ ಅವರು ನೂತನ ತುರ್ತು ನಿಗಾ ಘಟಕ ವಾರ್ಡ್ ಉದ್ಘಾಟಿಸಿದರು. ವಾರ್ಡ್‌ಗಳಲ್ಲಿ ರೋಗಿಗಳ ಪರಿಸ್ಥಿತಿಗೆ ಅನುಗುಣವಾಗಿ ಮಾಡಲಾಗಿರುವ ಕೆಂಪುವಲಯ, ಹಳದಿವಲಯ ಹಾಗೂ ಹಸಿರುವಲಯ ವಿಭಾಗಗಳನ್ನು ಉಸ್ತುವಾರಿ ಸಚಿವರು, ಶಾಸಕರು ಪರಿಶೀಲನೆ ಮಾಡಿದರು.

ADVERTISEMENT

ಅಲ್ಲದೇ, ದಾಖಲೆಗಳ ಸಮರ್ಪಕ ನಿರ್ವಹಣೆಗಾಗಿ ವ್ಯವಸ್ಥೆ ಮಾಡಲಾಗಿರುವ ಕಾಗದ ರಹಿತ ಕಚೇರಿಯ (ಇ-ಕಚೇರಿ) ಕಾರ್ಯನಿರ್ವಹಣೆಯನ್ನು ಸುರೇಶ್‌ ಕುಮಾರ್ ಅವರು ಪರಿಶೀಲಿಸಿದರು. ಹೊರರೋಗಿಗಳಾಗಿ ಚಿಕಿತ್ಸೆಗೆ ಬರುವವರೊಂದಿಗೆ ಸೌಜನ್ಯದಿಂದ ನಡೆದುಕೊಂಡು ಆರೋಗ್ಯ ಸೇವೆ ಸಲ್ಲಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದರು.

ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧಿ ಮಳಿಗೆಗೆ ಭೇಟಿ ನೀಡಿ, ಹೆಚ್ಚಿನ ಅವಧಿಯಲ್ಲಿ ಮಳಿಗೆ ತೆರೆದಿಬೇಕು. ಇದರಿಂದ ಬಡರೋಗಿಗಳಿಗೆ ಅನುಕೂಲವಾಗಲಿದೆ’ ಎಂದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಜನರ ಆರೋಗ್ಯ ಸಮಸ್ಯೆ, ತೊಂದರೆಗಳನ್ನು ಅಚ್ಚುಕಟ್ಟಾಗಿ ಆಲಿಸಿ ಚಿಕಿತ್ಸೆ ನೀಡಲು ವಿಶಾಲವಾದ ಹೊರರೋಗಿಗಳ ವಿಭಾಗ ತೆರೆಯಲಾಗಿದೆ. ಅಲ್ಲದೆ ಇ-ಆಫೀಸ್ ತಂತ್ರಾಂಶವನ್ನು ಈ ವಿಭಾಗ ಅಳವಡಿಸಿಕೊಂಡಿದೆ. ರಾಜ್ಯದಲ್ಲಿ ಇ-ಆಫೀಸ್ ತಂತ್ರಾಂಶ ಹೊಂದಿರುವ ಹೊರರೋಗಿಗಳ ವಿಭಾಗ ಇದೇ ಮೊದಲನೆಯದು’ ಎಂದರು.

‘ಹೊಸ ತುರ್ತು ನಿಗಾ ಘಟಕದಲ್ಲಿ ರೋಗಿಗಳ ಪರಿಸ್ಥಿತಿಗೆ ಅನುಸಾರ ಚಿಕಿತ್ಸೆ ನೀಡಲು 25 ಹಾಸಿಗೆಗಳ ವಾರ್ಡ್‌ಗಳನ್ನು ತೆರೆಯಲಾಗಿದೆ. ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವಾರ್ಡ್‌ಗಳನ್ನು ವರ್ಗಿಕರಿಸಲಾಗಿದೆ. ವೈದ್ಯರು ರೋಗಿಯ ಸಮಸ್ಯೆಗಳನ್ನು ಅರಿತು ಯಾವ ಮಾದರಿಯ ಚಿಕಿತ್ಸೆ ನೀಡಬೇಕು ತಿಳಿಯಲು ಇದು ಸಹಾಯಕವಾಗಲಿದೆ. ಅಲ್ಲದೆ ತುರ್ತು ನಿಗಾ ಘಟಕಕ್ಕೆ ಹೊಂದಿಕೊಂಡಂತೆ ಎರಡು ಐಸಿಯು ವಾರ್ಡ್‌ಗಳ ಕೆಲಸ ಕೂಡ ಆರಂಭದ ಹಂತದಲ್ಲಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ.ರವಿ, ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಸಂಜೀವ್, ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.