ಚಾಮರಾಜನಗರ: ಸದಾ ದುರಸ್ತಿಯಲ್ಲಿರುವ ಚಾಮರಾಜನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್‌ಹೌಸ್‌ನ ಮೋಟಾರ್ ಅನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿಸಲು ಶಾಸಕರು, ಪೌರಾಯುಕ್ತರು ಕ್ರಮ ಕೈಗೊಳ್ಳಬೇಕು, ನಗರದ ಕುಡಿಯುವ ನೀರಿನ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಣಕವಾಡಿದ್ದಾರೆ.
ವಾರಕ್ಕೊಮ್ಮೆಯಾದರೂ ಕಾವೇರಿ ನೀರು ಕೊಡಿ ಎಂದು ನಗರಸಭೆಗೆ ಮನವಿ ಮಾಡಿ ಬೇಸತ್ತಿರುವ ನಾಗರಿಕರು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತವಾಗಿ ಅಸಾಯಕತೆಯಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲದಲ್ಲೇ ಚಾಮರಾಜಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ನಾಗರಿಕರು 10 ರಿಂದ 15 ದಿನಗಳಿಗೊಮ್ಮೆ ‘ಕಾವೇರಿ’ ದರ್ಶನ ಮಾಡುವಂತಾಗಿದೆ. ದಿನನಿತ್ಯದ ಅಗತ್ಯತೆಗಳಿಗೆ ನೀರಿಲ್ಲದೆ ಹಣಕೊಟ್ಟು ಟ್ಯಾಂಕರ್‌ಗಳಿಂದ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿತಿಂಗಳು ನಗರಸಭೆಗೆ ನೀರಿನ ತೆರಿಗೆ ಕಟ್ಟಿದರೂ ಟ್ಯಾಂಕರ್‌ಗೆ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ. 20 ಲೀಟರ್ ಕ್ಯಾನ್ ನೀರು ಖರೀದಿಸುವುದು ಅನಿವಾರ್ಯವಾಗಿದೆ ಎಂದು ನಾಗರಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು ಅಂದಾಜು 1 ಲಕ್ಷ ಜನಸಂಖ್ಯೆ ಇದೆ. ಸೆಂಟ್ರಲ್ ಪಬ್ಲಿಕ್ ಹೆಲ್ತ್ ಅಂಡ್ ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್ ಆರ್ಗನೈಸೇಷನ್ ಮಾನದಂಡಗಳ ಪ್ರಕಾರ ಒಬ್ಬ ವ್ಯಕ್ತಿಗೆ ಪ್ರತಿದಿನ 135 ಲೀಟರ್ ನೀರಿನ ಅಗತ್ಯ ಇದೆ. ನಗರದ ಜನಸಂಖ್ಯೆಗೆ ಹೋಲಿಸಿದರೆ ಪ್ರತಿದಿನ 13.5 ಎಂಎಲ್‌ಡಿ ಕುಡಿಯುವ ನೀರಿನ ಅಗತ್ಯತೆ ಇದೆ.
ಆದರೆ, ನಗರಸಭೆ ಕೊಡುತ್ತಿರುವುದು 10 ದಿನಗಳಿಗೊಮ್ಮೆ 9 ಎಂಎಲ್‌ಡಿಗೂ ಕಡಿಮೆ ಪ್ರಮಾಣದ ನೀರು. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಹಾಳಾಗಿರುವುದು ಸಮಸ್ಯೆಗೆ ಕಾರಣ. 25 ವರ್ಷಗಳಷ್ಟು ಹಳೆಯದಾದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಸಮಸ್ಯೆಗೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ನಗರಕ್ಕೆ ಕಾವೇರಿ ನೀರು ಪೂರೈಸಲು ಟಿ.ನರಸೀಪುರ ತಾಲ್ಲೂಕಿನಲ್ಲಿರುವ ಸಂಗಮ ಸ್ಥಳದ ಬಳಿ ಜಾಕ್‌ವೆಲ್ ನಿರ್ಮಾಣ ಮಾಡಲಾಗಿದ್ದು ಅಲ್ಲಿರುವ ನೀರೆತ್ತುವ ಮೋಟಾರ್‌ಗಳು ಎರಡು ದಶಕಗಳಷ್ಟು ಹಳೆಯದಾಗಿದ್ದು ಆಗಾಗ ಕೆಟ್ಟುಹೋಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ.
ಜೊತೆಗೆ ಎರಡು ದಶಕಗಳ ಹಿಂದೆ ನಗರದ ಜನಸಂಖ್ಯೆ ಇಂದಿನ ಅರ್ಧದಷ್ಟೂ ಇರಲಿಲ್ಲ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲು ಅಳವಡಿಸಿದ್ದ ಪೈಪ್‌ಲೈನ್ ಹಾಳಾಗಿದೆ. ನೀರಿನ ಒತ್ತಡ ತಡೆದುಕೊಳ್ಳಲಾಗದೆ ಅಲ್ಲಲ್ಲಿ ಪೈಪ್‌ಗಳು ಒಡೆಯುತ್ತವೆ. ಜಾಕ್‌ವೆಲ್‌ನಿಂದ ಗರಿಷ್ಠ ಪ್ರಮಾಣದ ನೀರೆತ್ತಿದರೂ ಪೈಪ್‌ಲೈನ್ ವ್ಯವಸ್ಥೆಯಲ್ಲಿನ ದೋಷಗಳಿಂದ ನೀರು ಪೋಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ನಗರಸಭೆ ಇದುವರೆಗೂ ನೀರೆತ್ತುವ ಮೋಟಾರ್ ದುರಸ್ತಿಗೆ ವ್ಯಯಿಸಿರುವ ಹಣದಲ್ಲಿ ನಾಲ್ಕು ಹೊಸ ಮೋಟಾರ್‌ಗಳನ್ನೇ ಖರೀದಿಸಬಹುದಾಗಿತ್ತು. ನಗರಸಭೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಹೊಸ ಮೋಟಾರ್ ಖರೀದಿಸುವಷ್ಟು ನಗರಸಭೆಯಲ್ಲಿ ಅನುದಾನ ಇಲ್ಲವೇ, ಸ್ಥಳೀಯ ಶಾಸಕರಿಗೆ, ಪೌರಾಯುಕ್ತರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲವೇ ಎಂದು ಹೋರಾಟಗಾರ ಭಾನುಪ್ರಕಾಶ್ ಪ್ರಶ್ನಿಸುತ್ತಾರೆ.
₹ 158 ಕೋಟಿ ಮಾಲಂಗಿ ಯೋಜನೆ: ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರಕ್ಕೆ ಕುಡಿಯುವ ನೀರು ಪೂರೈಸಲು ₹ 158 ಕೋಟಿ ವೆಚ್ಚದ ಮಾಲಂಗಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು. ಇದೀಗ ಟೆಂಡರ್ ಕರೆಯಲಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ತಾತ್ಕಾಲಿಕವಾಗಿ ನೀರಿನ ಸಮಸ್ಯೆ ತಲೆದೋರಂತೆ ನಗರಸಭೆ ವ್ಯಾಪ್ತಿಯಲ್ಲಿರುವ 346 ಬೋರ್‌ವೆಲ್‌ಗಳ ಪೈಕಿ ಕಾರ್ಯ ನಿರ್ವಹಿಸುತ್ತಿರುವ 287 ಬೋರ್‌ವೆಲ್‌ಗಳಿಂದ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಕುಡಿಯುವ ನೀರು ಪೂರೈಕೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್.
ಪದೇಪದೇ ದುರಸ್ತಿಗೆ ಬರುತ್ತಿರುವ ನೀರೆತ್ತುವ ಮೋಟಾರ್ ಅನ್ನು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಳಿಸಿ ನಗರದ ಜನಸಾಮಾನ್ಯರ ನೋವು ಎಲ್ಲರಿಗೂ ತಿಳಿಯುವಂತೆ ಮಾಡಬೇಕುಭಾನುಪ್ರಕಾಶ್ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.