ADVERTISEMENT

ಚಾಮರಾಜನಗರ | ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ: ಟ್ಯಾಂಕರ್‌ಗೆ ಮೊರೆ

ಹನೂರು ತಾಲ್ಲೂಕಿನಲ್ಲಿ ಗಂಭೀರ: ಚಾಮರಾಜನಗರದಲ್ಲಿ 15 ದಿನಗಳಿಗೊಮ್ಮೆ ಕಾವೇರಿ ನೀರು– ಟ್ಯಾಂಕರ್‌ಗೆ ಮೊರೆ

ಬಾಲಚಂದ್ರ ಎಚ್.
Published 15 ಅಕ್ಟೋಬರ್ 2025, 2:26 IST
Last Updated 15 ಅಕ್ಟೋಬರ್ 2025, 2:26 IST
ಚಾಮರಾಜನಗರದ ನಾಲ್ಕನೇ ವಾರ್ಡ್‌ನ ಗಾಳಿಪುರ ಬಡಾವಣೆಯ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ದೃಶ್ಯ
ಚಾಮರಾಜನಗರದ ನಾಲ್ಕನೇ ವಾರ್ಡ್‌ನ ಗಾಳಿಪುರ ಬಡಾವಣೆಯ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ದೃಶ್ಯ   

ಚಾಮರಾಜನಗರ: ಮಳೆಗಾಲ ಮುಗಿಯುವ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಮುನ್ಸೂಚನೆಗಳು ಕಾಣುತ್ತಿವೆ. 

ಹನೂರು ತಾಲ್ಲೂಕಿನಲ್ಲಿ ಗಂಭೀರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳಿಂದ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಯಾವ ಗ್ರಾಮಗಳಿಗೆ ಟ್ಯಾಂಕರ್ ನೀರು: ಹುತ್ತೂರು ಗ್ರಾಮ ಪಂಚಾಯಿತಿಯ ಗೂಳ್ಯದ ಬಯಲು, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಳ್ಳಿ, ಕಡಬೂರು, ಗೋಡೆಸ್ಟ್‌ ನಗರ, ಎಲ್ಲೆಮಾಳ ಪಂಚಾಯಿತಿಯ ಎಂ.ಟಿ.ದೊಡ್ಡಿ, ಕಾರ್ಗೆರಿ ದೊಡ್ಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. 

ADVERTISEMENT

ಖಾಸಗಿ ಬೋರ್‌ವೆಲ್ ನೀರು: ಅಜ್ಜಿಪುರ ಪಂಚಾಯಿತಿ ದೊಮ್ಮನಗದ್ದೆ, ದೊಡ್ಡಾಲತ್ತೂರಿನ ಕೆಂಪಯ್ಯನಹಟ್ಟಿ, ದೊಡ್ಡಾಲತ್ತೂರು, ದಿನ್ನಳ್ಳಿ ಪಂಚಾಯಿತಿಯ ಸತ್ಯಮಂಗಲ, ಕೌದಳ್ಳಿ ಪಂಚಾಯಿತಿಯ ಹೊಸದೊಡ್ಡಿ, ಕೌದಳ್ಳಿ 4ನೇ ವಾರ್ಡ್‌, ಹೂಗ್ಯ ಪಂಚಾಯಿತಿಯ ಕೂಡ್ಲೂರು, ಮಾರ್ಟಳ್ಳಿ ಪಂಚಾಯಿತಿಯ ಸಂದನಪಾಳ್ಯ, ಹುತ್ತೂರು, ರಾಮಾಪುರ ಪಂಚಾಯಿತಿಯ ಮಾಮರದೊಡ್ಡಿ ಗ್ರಾಮಗಳಿಗೆ ಸಮೀಪದ ಖಾಸಗಿ ಬೋರ್‌ವೆಲ್‌ಗಳಿಂದ ನೀರೆತ್ತಿ ಪೂರೈಕೆ ಮಾಡಲಾಗುತ್ತಿದೆ.

ಕುಸಿದ ಅಂತರ್ಜಲ: 

ಈ ವರ್ಷ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು ಬೋರ್‌ವೆಲ್‌ಗಳಲ್ಲೂ ಸಮೃದ್ಧ ನೀರು ದೊರೆಯುತ್ತಿಲ್ಲ. ಲಭ್ಯವಿರುವ ಕೊಳವೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದೆ. ಸಮಸ್ಯೆ ಗಂಭೀರವಾಗಿರುವ ಗ್ರಾಮಗಳಿಗೆ ಆದ್ಯತೆ ಮೇಲೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ ಮಾಹಿತಿ ನೀಡಿದರು.

ಕೆಲವು ದಿನಗಳ ಹಿಂದಷ್ಟೆ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಎಲ್ಲ ಪಂಚಾಯಿತಿಗಳ ಪಿಡಿಒಗಳ ಸಭೆ ನಡೆಸಲಾಗಿದ್ದು ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸಬಹುದಾದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. 

ಕುಡಿಯುವ ನೀರು ಪೂರೈಕೆಗೆ ಗ್ರಾಮಪಂಚಾಯಿತಿಯ 15ನೇ ಹಣಕಾಸು ನಿಧಿ ಬಳಕೆಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ಅವಲೋಕಿಸಲು ನಿಯಮಿತವಾಗಿ ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗುತ್ತಿದ್ದು ಸಮಸ್ಯೆ ‌ಗಂಭೀರವಾಗದಂತೆ ಜಿಲ್ಲಾ ಪಂಚಾಯಿತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಉಪ ಕಾರ್ಯದರ್ಶಿ ಶೃತಿ ತಿಳಿಸಿದರು.

ನಗರದಲ್ಲೂ ನೀರಿಲ್ಲ: 

ಚಾಮರಾಜನಗರದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರಕ್ಕೆ 10 ರಿಂದ 15 ದಿನಗಳಿಗೊಮ್ಮೆ ಕಾವೇರಿ ನೀರು ಸರಬರಾಜಾಗುತ್ತಿದ್ದು ಸಾರ್ವಜನಿಕರು ಕೊಳವೆಬಾವಿ ಹಾಗೂ ಟ್ಯಾಂಕರ್‌ ನೀರು ಆಶ್ರಯಿಸಬೇಕಾಗಿದೆ. ವಾರ್ಡ್‌ ನಂಬರ್ 4ರ ಗಾಳಿಪುರ ಬಡಾವಣೆಯ ಹಲವೆಡೆ ನಗರಸಭೆ ಸದಸ್ಯ ಖಲೀಲ್‌ಉಲ್ಲ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಹೌಸಿಂಗ್ ಬೋರ್ಡ್‌ ಬಡಾವಣೆ, ಬುದ್ಧನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಸಾರ್ವಜನಿಕರೇ ಹಣಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಯ ಎಲ್ಲ ಬಡಾವಣೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಒತ್ತು ನೀಡಲಾಗುವುದು
–ಪ್ರಕಾಶ್, ನಗರಸಭೆ ಪ್ರಭಾರ ಪೌರಾಯುಕ್ತ
ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲ: ಅಸಮಾಧಾನ
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ನಗರಸಭೆ ಪೌರಾಯುಕ್ತರು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಸಂಸದ ಸುನೀಲ್ ಬೋಸ್‌ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಕೊಳವೆಬಾವಿಯ ಸೌಲಭ್ಯ ಇಲ್ಲದವರು ಮನೆಗಳನ್ನು ತೊರೆಯುವ ಪರಿಸ್ಥಿತಿಗೆ ಬಂದಿದ್ದಾರೆ. ಕನಿಷ್ಠ ವಾರಕ್ಕೊಮ್ಮೆ ನೀರು ಕೊಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಧ್ಯವಾಗದಿರುವುದು ನೋವಿನ ಸಂಗತಿ ಎಂದು ಹೋರಾಟಗಾರ ಭಾನುಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.