ADVERTISEMENT

ಚಾಮುಲ್‌ನಿಂದ ದೀಪಾವಳಿ ಕೊಡುಗೆ: ಹಾಲು ಖರೀದಿ ದರ ₹2 ಹೆಚ್ಚಳ

ಚಾಮುಲ್‌ನಿಂದ ದೀಪಾವಳಿ ಕೊಡುಗೆ, ಇಂದಿನಿಂದಲೇ ಪರಿಷ್ಕೃತ ದರ ಜಾರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 5:12 IST
Last Updated 21 ಅಕ್ಟೋಬರ್ 2022, 5:12 IST
ಚಾಮುಲ್‌
ಚಾಮುಲ್‌   

ಚಾಮರಾಜನಗರ:ರೈತರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹ 2 ಹೆಚ್ಚಿಸಲು ಜಿಲ್ಲಾ ಹಾಲು ಒಕ್ಕೂಟವು ನಿರ್ಧರಿಸಿದ್ದು, ಪರಿಷ್ಕೃತ ದರ ಶುಕ್ರವಾರದಿಂದಲೇ (ಅ.21) ಜಾರಿಗೆ ಬರಲಿದೆ.

ಇದೇ 15ರಂದು ನಡೆದಿದ್ದ ಚಾಮುಲ್‌ ಆಡಳಿತ ಮಂಡಳಿಯ 96ನೇ ಸಾಮಾನ್ಯ ಸಭೆಯಲ್ಲಿ ದರ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.ಸದ್ಯ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹26.85 ನೀಡುತ್ತಿದ್ದು, ಇನ್ನು ಮುಂದೆ ₹28.85 ನೀಡಲಿದೆ.

ಒಕ್ಕೂಟವು ಸಂಘಗಳಿಗೆ ಪ್ರತಿ ಲೀಟರ್‌ ಹಾಲಿಗೆ ಈವರೆಗೂ ₹28.75 ನೀಡುತ್ತಿದ್ದು, ಇನ್ನು ಮುಂದೆ ₹30.45 ಕೊಡಲಿದೆ.

ADVERTISEMENT

ಇದಲ್ಲದೇ ಸರ್ಕಾರ ಪ್ರತಿ ಲೀಟರ್‌ಗೆ ನೀಡುವ ₹5 ಪ್ರೋತ್ಸಾಹ ಧನವೂ ರೈತರಿಗೆ ಸಿಗಲಿದೆ.

‘ಇತ್ತೀಚಿನ ದಿನಗಳಲ್ಲಿ ಹಾಲಿನ ಉತ್ಪಾದನಾ ವೆಚ್ಚ ಅಧಿಕವಾಗಿದೆ. ರಾಸುಗಳಲ್ಲಿ ಚರ್ಮಗಂಟು ರೋಗ ಹರಡುತ್ತಿರುವುದರಿಂದ ಹಾಲಿನ ಇಳುವರಿ ಕುಂಠಿತವಾಗಿದೆ. ಇದರಿಂದಾಗಿ ಒಕ್ಕೂಟದ ಹಾಲಿನ ಶೇಖರಣೆ ಗಣನೀಯವಾಗಿ ಕಡಿಮೆಯಾಗಿದೆ. ಜೊತೆಗೆ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಖರೀದಿ ದರವನ್ನು ಹೆಚ್ಚಿಸಲಾಗಿದೆ’ ಎಂದು ಚಾಮುಲ್‌ ಹೇಳಿದೆ.

ಚಾಮುಲ್‌ ವ್ಯಾಪ್ತಿಯಲ್ಲಿ 463 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ ಸರಾಸರಿ 2.10 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ದಿನ ಜಿಲ್ಲಾ ವ್ಯಾಪ್ತಿಯಲ್ಲಿ 40,000 ಲೀಟರ್ ಹಾಲು, 9,000 ಲೀಟರ್ ಮೊಸರು ಹಾಗೂ ದೇಶದ ವಿವಿಧ ಭಾಗಗಳಿಗೆ 80,000 ಲೀಟರ್ ಯು.ಎಚ್.ಟಿ ಹಾಲನ್ನು ಮಾರಾಟ ಮಾರುತ್ತಿದೆ.

‘ತಮಿಳುನಾಡಿನ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಪ್ರತಿ ದಿನ 4000 ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಕೇರಳ ರಾಜ್ಯದಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರ ಅವರು ಹೇಳಿದ್ದಾರೆ.

‘ಖಾಸಗಿಯವರ ಆಮಿಷಕ್ಕೆ ಒಳಗಾಗದಿರಿ’

‘ಇತ್ತೀಚಿನ ದಿನಗಳಲ್ಲಿ ಖಾಸಗಿ ಡೇರಿರವರು ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ಆಮಿಷ ತೋರುತ್ತಿದ್ದು, ಆಮಿಷಕ್ಕೆ ಬಲಿಯಾಗಬೇಡಿ’ ಎಂದು ನಾಗೇಂದ್ರ ಅವರು ರೈತರಿಗೆ ಮನವಿ ಮಾಡಿದ್ದಾರೆ.

‘ಚಾಮುಲ್ ವತಿಯಿಂದ ರೈತರಿಗೆ ರಾಸು ವಿಮೆ, ಪಶು ವೈದ್ಯಕೀಯ ಸೇವೆ, ಸದಸ್ಯರಿಗೆ ₹1 ಲಕ್ಷ ವಿಮೆ, ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ₹15 ಸಾವಿರ ಪರಿಹಾರ, ಒಕ್ಕೂಟದ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ₹ 3 ಲಕ್ಷ ಅನುದಾನ, ಕರ್ನಾಟಕ ಹಾಲು ಮಹಾಮಂಡಲದಿಂದ ₹4.5 ಲಕ್ಷ ಅನುದಾನ, ರೈತ ಸದಸ್ಯರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ.ಖಾಸಗಿಯವರ ಆಮಿಷಕ್ಕೆ ಒಳಗಾಗಿ ಸಹಕಾರ ವ್ಯವಸ್ಥೆಗೆ ದಕ್ಕೆ ತರುವಂತಹ ನಿರ್ಧಾರಗಳನ್ನು ರೈತರು ಮಾಡದೆ ನಿರಂತರ ಮಾರುಕಟ್ಟೆ ಒದಗಿಸುವ ‘ನಂದಿನಿ‘ ಗೆ ಹಾಲು ಸರಬರಾಜು ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.