ADVERTISEMENT

ಚಂಗಡಿ ಸ್ಥಳಾಂತರ: ಮೊದಲ ಸಭೆ

ಸಮಗ್ರ ಪುನರ್ವಸತಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 15:51 IST
Last Updated 20 ಮೇ 2020, 15:51 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪುನರ್‌ವಸತಿ ಸಮಿತಿಯ ಮೊದಲ ಸಭೆ ನಡೆಯಿತು
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪುನರ್‌ವಸತಿ ಸಮಿತಿಯ ಮೊದಲ ಸಭೆ ನಡೆಯಿತು   

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಚಂಗಡಿ ಗ್ರಾಮವನ್ನು ಸ್ಥಳಾಂತರಿಸುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಪುನರ್‌ವಸತಿ ಸಮಿತಿಯ ಮೊದಲ ಸಭೆ ಬುಧವಾರ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ‘ಚಂಗಡಿ ಗ್ರಾಮವನ್ನು ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರದ ಆದೇಶ ಅನುಸಾರ ಕಾರ್ಯೋನ್ಮುಖವಾಗಬೇಕಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪುನರ್‌ವಸತಿ ಕಲ್ಪಿಸುವ ಯೋಜನೆ ಸಿದ್ಧವಾಗಬೇಕಿದೆ. ಗೊಂದಲಗಳಿಗೆ ಅವಕಾಶ ಕೊಡದೆ, ಬಹಳ ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ’ ಎಂದರು.

‘ಸಮಗ್ರ ಪುನರ್ವಸತಿ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಲು ವಿವಿಧ ಇಲಾಖೆಗಳನ್ನೊಳಗೊಂಡ ಜಿಲ್ಲಾಮಟ್ಟದ ಪುನರ್‌ವಸತಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿ ನಿರ್ವಹಿಸಬೇಕಿರುವ ಕಾರ್ಯವಿಧಾನಗಳನ್ನು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಸ್ವಯಂ ಪ್ರೇರಿತರಾಗಿ ಪುನರ್‌ವಸತಿ ಬಯಸುತ್ತಿರುವ ಗ್ರಾಮದಲ್ಲಿ ಸಭೆ ಆಯೋಜಿಸಿ ಅಲ್ಲಿನ ಸ್ಥಿತಿಗತಿಗಳು, ಜನರ ಅಭಿಪ್ರಾಯ, ಅನಿಸಿಕೆ, ಬೇಡಿಕೆ, ಸಲಹೆ ಸೂಚನೆಗಳನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಪುನರ್‌ವಸತಿ ಪಡೆಯಲು ಹಕ್ಕು ಉಳ್ಳ ಕುಟುಂಬಗಳು ಹಾಗೂ ಅವರಿಗೆ ಸಂಬಂಧಿಸಿದ ಸದಸ್ಯರು. ವಯಸ್ಸು, ಆಸ್ತಿ-ಪಾಸ್ತಿ ಇತರೆ ವಿವರಗಳನ್ನು ದಾಖಲಿಸಬೇಕು. ಭೂ ದಾಖಲೆಗಳನ್ನು ಸಕಾಲಿನಗೊಳಿಸಿಕೊಳ್ಳಬೇಕು. ಜಮೀನುಗಳನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಮೋಜಣಿಗೊಳಪಡಿಸಬೇಕು. ಕುಟುಂಬಗಳ ಚರ ಮತ್ತು ಸ್ಥಿರಾಸ್ತಿಗಳನ್ನು ಅಧಿಕಾರಿಗಳ ಮೂಲಕ ಮೌಲ್ಯೀಕರಿಸುವ ಪ್ರಕ್ರಿಯೆ ಆಗಬೇಕು’ ಎಂದರು.

‘ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಸಬೇಕು. ಮನೆಯ ಯಜಮಾನರನ್ನು ಖುದ್ದು ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆಯಬೇಕು. ಭೇಟಿಯ ದಿನಾಂಕವನ್ನು ಮೊದಲೇ ಪ್ರಚುರಪಡಿಸಬೇಕು. ಯಾರೊಬ್ಬರ ಮಾಹಿತಿಯೂ ಬಿಟ್ಟು ಹೋಗಬಾರದು’ ಎಂದು ಜಿಲ್ಲಾಧಿಕಾರಿ ರವಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ್‌ರಾವ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಕಾರ್ಯದರ್ಶಿ ವಿ.ಏಡುಕುಂಡಲು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹೊನ್ನೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಗ್ರಾಮದ ಮುಖಂಡರಾದ ಕರಿಯಪ್ಪ, ಗ್ರಾಮದ ಇತರೆ ಮುಖ್ಯಸ್ಥರು ಸಭೆಯಲ್ಲಿದ್ದರು.

ಚಂಗಡಿಗೆ ಸುರೇಶ್‌ ಕುಮಾರ್‌ ಇಂದು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಗುರುವಾರ ಚಂಗಡಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪುನರ್‌ವಸತಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಬೆಳಿಗ್ಗೆ 8.30ಕ್ಕೆ ಕೊಳ್ಳೇಗಾಲಕ್ಕೆ ಬರುವ ಸಚಿವರು, 11 ಗಂಟೆಗೆ ಚಂಗಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ3.30ಕ್ಕೆ ಕೊಳ್ಳೇಗಾಲದಲ್ಲಿ ಕೋವಿಡ್‌–19 ಸಂಬಂಧ ಅಧಿಕಾರಿಗಳೊಂದಿಗೆ ಸಭೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.