ಕೊಳ್ಳೇಗಾಲ: ಜಗತ್ತಿಗೆ ಶಾಂತಿ ಹಾಗೂ ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನವನ್ನು ಸಂಭ್ರಮಿಸುವ ಕ್ರಿಸ್‌ಮಸ್ ಹಬ್ಬದ ಖುಷಿ ಜಿಲ್ಲೆಯಾದ್ಯಂತ ಪಸರಿಸುತ್ತಿದೆ. ಕ್ರಿಶ್ಚಿಯನ್ನರು ಪವಿತ್ರ ಕ್ರಿಸ್‌ಮಸ್ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಜಿಲ್ಲೆಯ ಎಲ್ಲ ಚರ್ಚ್‌ಗಳು ಸಿಂಗಾರಗೊಳ್ಳುತ್ತಿವೆ.
ಮನುಷ್ಯ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು, ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಕ್ರಿಸ್‌ಮಸ್ ಆಚರಣೆಯ ಮುಖ್ಯ ಉದ್ದೇಶ ಎನ್ನುತ್ತಾರೆ ಧರ್ಮಗುರುಗಳು.
ಡಿಸೆಂಬರ್ ಬಂದರೆ ಕ್ರಿಶ್ಚಿಯನ್ನರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಹಬಕ್ಕೆ ಎರಡು ವಾರಗಳು ಇರುವಂತೆಯೇ ಸಿದ್ಧತೆಗಳು ಆರಂಭವಾಗುತ್ತವೆ. ಯೇಸುಕ್ರಿಸ್ತನ ಜನ್ಮ ದಿನಾಚರಣೆಗೆ (ಡಿ.25) ಮೂರು ದಿನಗಳಷ್ಟೇ ಬಾಕಿ ಇದ್ದು ಕೇಕ್ ತಯಾರಿ ಪ್ರಕ್ರಿಯೆ ಚುರುಕುಗೊಂಡಿದೆ.
ಹಬ್ಬದ ನಿಮಿತ್ತ ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ಇರಿಸಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತಿದೆ. ಮನೆಗಳಿಗೆ ಬಣ್ಣ ಬಳಿದು ಒಳ ಹಾಗೂ ಹೊರಾಂಗಣ ಅಲಂಕಾರ ನಡೆಯುತ್ತಿದೆ. ಮನೆಯ ಹೊರಗೆ ನಕ್ಷತ್ರ ದೀಪಗಳು ಮಿನುಗಲು ಆರಂಭವಾಗಿವೆ. ಕೆಲವರು ಮನೆಯ ಮುಂದೆ ಗೋದಲಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಚರ್ಚ್‌ಗಳಿಗೆ ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
ಹಬ್ಬಕ್ಕೆ ಖರೀದಿ ಭರಾಟೆಯೂ ಜೋರಾಗಿದೆ. ಕ್ರಿಸ್‌ಮಸ್ ಟ್ರೀ, ಹಲವು ವಿನ್ಯಾಸಗಳ ನಕ್ಷತ್ರಗಳು, ಶುಭ ಸಂಕೇತದ ಗಂಟೆ, ರಿಬ್ಬನ್, ಬಣ್ಣದ ಕ್ಯಾಲೆಂಡರ್, ಅಲಂಕಾರಿಕ ದೀಪಗಳ ಖರೀದಿಯೂ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕ್ಯಾರಲ್ ಗೀತೆಗಳು:
ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಕ್ಯಾರಲ್ ಗೀತೆ ಅಥವಾ ಭಜನೆ ಹಾಡುವುದು ವಿಶೇಷ. ಈ ಬಾರಿಯೂ ಹಬ್ಬಕ್ಕಿಂತ ಮೊದಲೇ ಕ್ಯಾರಲ್ ಹಾಡುವ ಸಾಂಪ್ರದಾಯ ನಡೆಯುತ್ತಿದೆ.
ಯುವಕ, ಯುವತಿಯರ ಗುಂಪುಗಳು ರಾತ್ರಿ ಬಡಾವಣೆ ವ್ಯಾಪ್ತಿಯ ಮನೆಗಳಿಗೆ ತೆರಳಿ ಕ್ಯಾರಲ್ ಹಾಡುತ್ತಿದ್ದಾರೆ. ಯೇಸುಕ್ರಿಸ್ತ ನಿಮ್ಮ ಮನೆಯಲ್ಲೂ ಜನ್ಮಿಸಿದ್ದು ಇಲ್ಲಿಯೇ ಜೀವಿಸುತ್ತಾನೆ ಎಂಬ ಭಾವನೆ ಮೂಡಿಸುವುದು ಕರೋಲ್ ಗೀತೆಗಳ ಗಾಯನದ ಹಿಂದಿರುವ ಉದ್ದೇಶ.
‘ಹಾರ್ಮೋನಿಯಂ, ಕಾಂಗೋ, ಕೀಬೋರ್ಡ್, ತಬಲ ಸೇರಿದಂತೆ ವಿವಿಧ ಸಂಗೀತ ಪರಿಕರಗಳನ್ನು ಬಳಸಿ ಹಾಡುವ ಕ್ಯಾರಲ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ತೆಲುಗು, ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕ್ಯಾರಲ್‌ಗಳನ್ನು ಹಾಡಿ ಕುಣಿಯುತ್ತಿರುವ ದೃಶ್ಯಗಳು ಮನೆಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಕಾಣುತ್ತಿವೆ’ ಎನ್ನುತ್ತಾರೆ ಸಮುದಾಯದ ಮುಖಂಡರಾದ ಜಾನ್ ಪೀಟರ್.
ನಕ್ಷತ್ರ, ಗೋದಲಿ:
‘ಕ್ರಿಸ್‌ಮಸ್ ಹಬ್ಬದ ಸಂದರ್ಭ ಬೆಳಕಿನ ನಕ್ಷತ್ರಗಳನ್ನು ತೂಗಿಸುವುದು ಶತಮಾನಗಳಿಂದ ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಯೇಸುಕ್ರಿಸ್ತಜನಿಸಿದಾಗ ನೋಡಲು ದೂರದ ದೇಶಗಳಿಂದ ಮೂವರು ಪಂಡಿತರು ಬರುತ್ತಾರೆ. ಆದರೆ, ಅವರಿಗೆ ಕ್ರಿಸ್ತ ಜನಿಸಿದ ಸ್ಥಳ ತಿಳಿದಿರುವುದಿಲ್ಲ. ಈ ಸಂದರ್ಭ ಬಾನಿನಲ್ಲಿ ಉದಯಿಸಿದ ನಕ್ಷತ್ರವು ಅವರ ಮುಂದೆ ಸಾಗುತ್ತ ಕ್ರಿಸ್ತ ಜನಿಸಿದ ಸ್ಥಳವನ್ನು ತೋರಿಸುತ್ತದೆ ಎಂಬ ಕಥೆ ಅಸ್ತಿತ್ವದಲ್ಲಿದೆ. ಅದರಂತೆ ಇಂದಿಗೂ ಕ್ರಿಸ್‌ಮಸ್ ಪ್ರಯುಕ್ತ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿ ಹಾಕಿ ಪ್ರತಿ ಮನೆಗಳಲ್ಲಿಯೂ ಕ್ರಿಸ್ತ ಜನಿಸಿದ್ದಾನೆ ಎಂದು ಸಾರಲಾಗುತ್ತದೆ. ಜೊತೆಗೆ ಮನೆಯಲ್ಲಿ ಗೋದಲಿ ನಿರ್ಮಿಸಿ ಯೇಸುವಿನ ಜನನದ ವೃತ್ತಾಂತ ಸಾರಲಾಗುತ್ತದೆ’ ಎಂದು ಬೆತೆಲೆ ಲೂಥರನ್ ಚರ್ಚ್ ಫಾಸ್ಟರ್ ರೆ.ಜೋಶುವಾ ಪ್ರಸನ್ನ ಕುಮಾರ್ ಹೇಳುತ್ತಾರೆ.
ಕ್ರಿಸ್‌ಮಸ್ ಸಂದರ್ಭ ಕೇಕ್‌ಗೆ ಬೇಡಿಕೆ ಹೆಚ್ಚಿದ್ದು, ಬೇಕರಿಗಳಲ್ಲಿ ಕೇಕ್ ತಯಾರಿ ಕಾರ್ಯ ಬಿರುಸಾಗಿ ನಡೆಯುತ್ತದೆ. ಮನೆಗಳಲ್ಲಿಯೂ ಕೇಕ್ ತಯಾರಿ ಮಾಡಲಾಗುತ್ತದೆ.
‘ಕಷ್ಟ ನಿವಾರಣೆಗೆ ಪ್ರಾರ್ಥನೆ’
‘ದೇಶದ ಹಲವೆಡೆ ಪ್ರಕೃತಿ ವಿಕೋಪ ಸಹಿತ ಅತಿವೃಷ್ಟಿಯಿಂದಾಗಿ ಸಾವು ನೋವುಗಳು ಸಂಭವವಿಸಿವೆ. ಆರ್ಥಿಕ ನಷ್ಟ ಉಂಟಾಗಿದೆ. ಹಾಗಾಗಿ ಬಾರಿ ವಿಶೇಷವಾಗಿ ಪ್ರವಾಹ ಸೇರಿದಂತೆ ಇನ್ನಿತರ ಕಷ್ಟಗಳು ದೂರವಾಗಲಿ’ ಎಂದು ಕ್ರಿಸ್‌ಮಸ್ ಹಬ್ಬದ ಸಂದರ್ಭ ಯೇಸುಕ್ರಿಸ್ತರ ಬಳಿ ಪ್ರಾರ್ಥನೆ ಮಾಡಲಾಗುತ್ತದೆ. ಎಂದು ಬೇತೆಲ್ ಲೂಥರನ್ ಚರ್ಚ್ ಫಾಸ್ಟರ್ ಜೋಶುವಾ ಪ್ರಸನ್ನ ಕುಮಾರ್ ತಿಳಿಸಿದರು.
ಕೇಕ್ ವೈನ್ ತಯಾರಿ
ಕ್ರಿಸ್‌ಮಸ್ ಹಬ್ಬದಲ್ಲಿ ಕೇಕ್ ತಯಾರಿಕೆಗೆ ವಿಶೇಷ ಮಹತ್ವ ಇದೆ. ಕೇಕ್ ಇಲ್ಲದೆ ಹಬ್ಬ ಅಪೂರ್ಣ. ಬಡವರಾದರೂ ಹೊಸ ಬಟ್ಟೆ ತೊಟ್ಟು ಕೇಕ್ ತಿಂದು ಸಂಭ್ರಮಿಸುವುದು ಹಬ್ಬದ ವಿಶೇಷ. ಸ್ನೇಹಿತರು ಕುಟುಂಬಸ್ಥರಿಗೆ ಕೇಕ್ ಹಂಚಲಾಗುತ್ತದೆ. ಹಬ್ಬದ ಸಂದರ್ಭ ಕೇಕ್ ಮಿಕ್ಸಿಂಗ್ ಸಂಪ್ರದಾಯವೂ ಇದೆ. ದ್ರಾಕ್ಷಿ ಬಾದಾಮಿ ಗೋಡಂಬಿ ಪಿಸ್ತಾ ಖರ್ಜೂರ ಚೆರಿ ಹಣ್ಣು ಹಾಗೂ ಒಣ ಹಣ್ಣುಗಳನ್ನು ಬಳಸಿ ಕೇಕ್ ತಯಾರಿಸಲಾಗುತ್ತದೆ. ಕ್ರಿಸ್‌ಮಸ್ ಕೇಕ್ ಪ್ಲಮ್ ಕೇಕ್ ಫ್ರೂಟ್ ಕೇಕ್ ಚಾಕೋ ಕೇಕ್ ಮಿಕ್ಸ್ ಸಲಾಡ್ ಕೇಕ್ ಸಹಿತ ಬಗೆಬಗೆಯ ಕೇಕ್‌ಗಳನ್ನು ತಯಾರಿಸುವುದು ಹಬ್ಬದ ವಿಶೇಷ ಎನ್ನುತ್ತಾರೆ ಕೊಳ್ಳೇಗಾಲದ ಎಲಿಜಬೆತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.