
ಚಾಮರಾಜನಗರ: ಗುರುವಾರದಿಂದ ಆರಂಭವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧದ ಹೆಸರಿನಲ್ಲಿ ಮುಗ್ಧ ಭಕ್ತರ ನಂಬಿಕೆ, ಆಚರಣೆಗೆ ಅಡ್ಡಿಯಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಮಾಡಿದೆ.
ಸಮಿತಿಯ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ ಹೊರಡಿಸಿರುವ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಆದೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
’ಐದು ಶತಮಾನಗಳಿಂದ ನಡೆದು ಬಂದಿರುವ ಈ ಜಾತ್ರೆಯಲ್ಲಿ ಪ್ರಾಣಿ, ಪಕ್ಷಿ ಬಲಿ, ಬಲಿ ಪೀಠ ಮುಂತಾದ ಆಚರಣೆಗಳಿಲ್ಲ. ಇದನ್ನು ನೀವು ಖುದ್ದಾಗಿ ಪರಿಶೀಲಿಸಬಹುದು. ಪ್ರಾಣಿ ಬಲಿ ನಿಷೇಧಕ್ಕೆ ಸಂಬಂಧಿಸಿದ ಆದೇಶವು ಅವಾಸ್ತವಿಕ, ಊಹಾಪೋಹ ಮಾಹಿತಿಗಳನ್ನು ಆಧರಿಸಿದೆ. ಈ ಆದೇಶ ಮಂಟೇಸ್ವಾಮಿ ಪರಂಪರೆ ಒಕ್ಕಲುಗಳ ಭಕ್ತರ ಆಚರಣೆ ಮತ್ತು ನಂಬಿಕೆ, ಧಾರ್ಮಿಕ ವಿಧಿಗಳಿಗೆ ಧಕ್ಕೆ ಉಂಟುಮಾಡುತ್ತದೆ. ಜೊತೆಗೆ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಮನವಿಯಲ್ಲಿ ಅವರು ಹೇಳಿದ್ದಾರೆ.
‘ಈ ಒಕ್ಕಲುಗಳ ಭಕ್ತರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು, ಮಾಂಸಾಹಾರದ ಅಡುಗೆ ಮತ್ತು ಪಂಕ್ತಿ ಭೀಜನೆ ಮಾಡುವುದಕ್ಕೆ ಅಡ್ಡಿಯಾಗದಂತೆ ನೋಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ, ತಾವು ಹೊರಡಿಸಿರುವ ಆದೇಶದಲ್ಲಿ ಈ ಅಂಶಗಳನ್ನು ಪರಿಗಣಿಸಲಾಗಿಲ್ಲ’ ಎಂದು ಹೇಳಿದ್ದಾರೆ.
‘ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ ಅನಾಗರಿಕ, ಅಸಂವಿಧಾನಿಕ ಹಾಗೂ ಅಪರಾಧವಾಗಿದ್ದು ಅದನ್ನು ನಾವೂ ಖಂಡಿಸುತ್ತೇವೆ. ಆದರೆ, ಪ್ರಾಣಿ ಬಲಿ ನಿಷೇಧದ ನೆಪದಲ್ಲಿ ಪ್ರಾಣಿ ಬಲಿ ನಡೆಯದ ಈ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ನಡೆಸುವ ಯಾವುದೇ ಕಾನೂನು ಜಾರಿ ಪ್ರಕ್ರಿಯೆಗಳು ಅಮಾಯಕ ಜನ ಸಂಸ್ಕೃತಿಯ ಮೇಲೆ ಪ್ರಹಾರವಾಗಿದ್ದು, ಅದನ್ನು ಖಂಡಿಸಿತ್ತೇವೆ’ ಎಂದು ಮನವಿಯಲ್ಲಿ ಹೇಳಿದ್ದಾರೆ.
ಸಮಿತಿ ಅಧ್ಯಕ್ಷ ಎಸ್.ಎಂ.ಉಗ್ರ ನರಸಿಂಹೇಗೌಡ, ಕಾರ್ಯದರ್ಶಿ ಶಂಭುಲಿಂಗಸ್ವಾಮಿ ಮತ್ತು ಜಾನಪದ ವಿದ್ವಾಂಸ ಮಹಾದೇವಶಂಕನಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.