
ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಜ.3ರಿಂದ 7ರವರೆಗೆ ನಡೆಯುವ ಚಿಕ್ಕಲ್ಲೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ನಿಯಮಗಳ ನೆಪವೊಡ್ಡಿ ತೊಂದರೆ ನೀಡಬಾರದು ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಉಗ್ರನರಸಿಂಹೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಹೆಸರಿನಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಜಾತ್ರೆಗೆ ಬರುವ ಭಕ್ತರನ್ನು ತಪಾಸಣೆ ಮಾಡಬಾರದು. ಭಕ್ತರು ತಂದಿರುವ ಸಾಮಾಗ್ರಿಗಳನ್ನೆಲ್ಲ ಹೊರತೆಗೆದು ಪರೀಕ್ಷಿಸುವ ನೆಪದಲ್ಲಿ ಭಯ ಸೃಷ್ಟಿಸಬಾರದು.
ಜಾತ್ರೆಯಲ್ಲಿ ಪ್ರಾಣಿಬಲಿಯ ವಿರುದ್ಧ ಜಾಗೃತಿ ಮೂಡಿಸಲು ಬರುವ ವ್ಯಕ್ತಿಗಳಿಗೆ ಜಾತ್ರೆ ನಡೆಯುವ ಆವರಣ ಪ್ರವೇಶಿಸಲು ನಿರ್ಬಂಧ ಹೇರಬೇಕು. ಜಾತ್ರೆಯ ಆಚರಣೆಗಳಲ್ಲಿ, ಪಂಕ್ತಿಸೇವೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು 2017ರಲ್ಲಿ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ಸ್ಪಷ್ಟಪಡಿಸಿದೆ. ಜಿಲ್ಲಾಡಳಿತ ಕೂಡ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದು ಉಗ್ರ ನರಸಿಂಹೇಗೌಡ ಒತ್ತಾಯಿಸಿದರು.
ಜಿಲ್ಲಾಡಳಿತ ತಡೆಯಬೇಕೆಂದು ಯಾವುದೇ ವ್ಯಕ್ತಿ, ಸಂಘವು ಜನಜಾಗೃತಿ ಹೆಸರಲ್ಲಿ ಜಾತ್ರೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಬಾರದು.ಈ ಎಲ್ಲದರ ಬಗ್ಗೆ ಯಾರೂ ಹಸ್ತಕ್ಷೇಪ ಮಾಡದಿರುವಂತೆ 2017ರ ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟ ಹೇಳಿದೆ ಅದನ್ನು ಜಿಲ್ಲಾಡಳಿತ ಪಾಲಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಲ್ಲೂರು ಜಾತ್ರೆಯಲ್ಲಿ ನಡೆಯುವ ಪಂಕ್ತಿಸೇವೆಯಲ್ಲಿ ಪ್ರಾಣಿಬಲಿ ನಡೆಯುತ್ತದೆ ಎಂದು ಪ್ರಾಣಿದಯಾ ಸಂಘದವರು ಹಿಂದೆ ತಪ್ಪಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಹೈಕೋರ್ಟ್ 2017ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ ಮಾಂಸಹಾರದ ಪಂಕ್ತಿಸೇವೆಗೆ, ಭಕ್ತರ ಆಚರಣೆಗೆ ಅಡ್ಡಿಪಡಿಸಬಾರದು. ಪ್ರಾಣಿ ಬಲಿಯನ್ನು ಮಾತ್ರ ತಡೆಗಟ್ಟಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಅದರಂತೆ ಭಕ್ತರು ಇಷ್ಟದ ಆಹಾರ ಸೇವನೆಗೆ ಅವಕಾಶ ನೀಡಬೇಕು ಎಂದರು.
ಸಾಹಿತಿ ಶಂಕನಪುರ ಮಹದೇವ ಮಾತನಾಡಿ, ಚಿಕ್ಕಲ್ಲೂರು ಜಾತ್ರೆ ಸಂಬಂಧ ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಯಲ್ಲಿ 2017ರ ಹೈಕೋರ್ಟ್ ಮಧ್ಯಂತರ ಆದೇಶವನ್ನು ಸೇರಿಸಬೇಕು. ಮಂಟೇಸ್ವಾಮಿ ಪರಂಪರೆಯ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಚಿಕ್ಕಲ್ಲೂರು ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಸಾರಿಗೆ, ವೈದ್ಯಕೀಯ, ಶುಚಿತ್ವ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕು.
ಜಾತ್ರೆ ಆಚರಣೆ ಮಾಡುವಾಗ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಕ್ತರ ಮೇಲೆ ವಿನಾಕಾರಣ ಅತಿರೇಕದ ವರ್ತನೆ ತೋರಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಂಭುಲಿಂಗ ಸ್ವಾಮಿ, ಡಾ.ವಿ.ಎನ್.ಮಹದೇವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.